ಕಾರವಾರ: ಗಂಡ-ಹೆಂಡ್ರು ಜಗಳದಲ್ಲಿ ಕೂಸು ಬಡವಾಯ್ತು ಅನ್ನೋದು ಹಳೆಯ ಗಾದೆ ಮಾತು. ಆದ್ರೆ, ಇಲ್ಲಿ ಗಂಡ-ಹೆAಡ್ತಿ ನಡುವಿನ ಜಗಳದಲ್ಲಿ ಮಗು ಪ್ರಾಣವನ್ನೇ ಕಳೆದುಕೊಂಡಿದೆ.
ಗಂಡ-ಹೆಂಡ್ತಿ ತಮ್ಮ ತಮ್ಮ ನಡುವೆ ಜಗಳವಾಡ್ಕೊಂಡು ತಮ್ಮ ಆರು ವರ್ಷದ ಮೂಕ ಮಗನನ್ನು ತಾಯಿ ಸಿಟ್ಟಿನಿಂದ ನಾಲೆಗೆ ಎಸೆದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ನಡೆದಿದೆ. ಬಾಲಕ ವಿನೋದ್ (೬) ಶವ ಭಾನುವಾರ ನಾಲೆಯಲ್ಲಿ ಪತ್ತೆಯಾಗಿದೆ. ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಮಗುವನ್ನು ನಾಲೆಗೆ ಎಸೆದಿದ್ದ ತಾಯಿ ಈಗ ಕಣ್ಣಿರು ಹಾಕುತ್ತ ಕುಳಿತಿದ್ದಾಳೆ.
ರವಿಕುಮಾರ್ ಹಾಗೂ ಸಾವಿತ್ರಿ ಎಂಬ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಮೂಕನಾಗಿದ್ದ ಮಗನ ಮೇಲೆ ಪ್ರತಿ ಬಾರಿ ಕುಡಿದು ಬಂದು ಜಗಳವಾಡುತ್ತಿದ್ದ ರವಿಕುಮಾರ್, ಮಗ ಸಾಯಲಿ ಎಂದು ಬೈಯುತ್ತಿದ್ದ. ಶನಿವಾರ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಸಾವಿತ್ರಿಯೇ ಮಗನನ್ನು ನಾಲೆಗೆ ಎಸೆದಿದ್ದಳು ಎಂದು ತಿಳಿದುಬಂದಿದೆ.
ಕಾಳಿ ನದಿಗೆ ಸೇರುವ ನಾಲೆ ಇದಾಗಿದ್ದು, ಮೊಸಳೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದು ಗೊತ್ತಿದ್ದೇ ತಾಯಿ ಮಗುವನ್ನು ನಾಲೆಗೆ ಬಿಸಾಡಿದ್ದಳು ಎನ್ನಲಾಗಿದೆ.
ದಂಪತಿಗಳ ಹುಚ್ಚಾಟವನ್ನು ಅರಿತ ಸ್ಥಳೀಯರು ಶನಿವಾರ ರಾತ್ರಿಯೇ ಬಾಲಕನಿಗಾಗಿ ಹುಡುಕಾಟ ನಡೆಸಿದ್ದರಾದರೂ ಆತ ಪತ್ತೆಯಾಗಿರಲಿಲ್ಲ. ಭಾನುವಾರ ಶವ ಪತ್ತೆಯಾಗಿದ್ದು, ಬಾಲಕನ ಬಲಗೈಯನ್ನು ಮೊಸಳೆ ತಿಂದುಹಾಕಿದೆ.
ದಾಂಡೇಲಿಯ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಬಾಲಕನ ಮೃತದೇಹ ಪತ್ತೆ ಮಾಡಲಾಗಿದೆ. ಈಗ ದಂಪತಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದು, ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.