ಬೆಂಗಳೂರು: ಶ್ರವಣಬೆಳಗೊಳ ಕ್ಷೇತ್ರದ ಜನರ ಏಳಿಗೆಗಾಗಿ ನಾನು ದುಡಿಯುತ್ತಿದ್ದು, ನೀರಾವರಿಗಾಗಿ ರೈತರು ಪಡುವ ಕಷ್ಟವನ್ನು ನೋಡಿ ಏತ ನೀರಾವರಿ ಜಾರಿಗೊಳಿಸಿದ್ದೇನೆ. ನನ್ನ ಈ ಕಾರ್ಯವನ್ನು ಮೆಚ್ಚಿ ನನ್ನನ್ನು ಗೌರವಿಸುತ್ತಿರುವುದು ಸಂತಸ ವಿಚಾರ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.
ವೈಟ್ ಪೇಪರ್ ವಾರ್ಷಿಕೋತ್ಸವದ ಅಂಗವಾಗಿ ನೀಡಿದ ಬೆಳಗೊಳದ ಭಗೀರಥ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಅರ್ಧದಷ್ಟು ಹಳ್ಳಿಗಳು ನೀರಾವರಿ ವ್ಯವಸ್ಥೆಯನ್ನು ಹೊಂದಿಲ್ಲ. ಹೀಗಾಗಿ, ಆಯಾ ಕಾಲಘಟ್ಟದಲ್ಲಿದ್ದ ಸರಕಾರದ ಸಹಕಾರದಿಂದ ನನ್ನ ಕ್ಷೇತ್ರದ ಸುಮಾರು 100ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದ್ದೇನೆ. ಇಂದು ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಸಂತೆಶಿವರ ಕೆರೆಯನ್ನು ತುಂಬಿಸುವ ಸಲುವಾಗಿ ಖ್ಯಾತ ಸಾಹಿತಿ ಎಸ್.ಎಲ್. ಬೈರಪ್ಪನವರ ಆಶಯದಂತೆ ಅಂದಿನ ಬಿಜೆಪಿ ಸರಕಾರದ ಸಹಕಾರದಿಂದ ಕ್ರಮ ತೆಗೆದುಕೊಳ್ಳಲಾಗಿತ್ತು. ಅಂತೆಯೇ ತೋಟಿ ಕೆರೆ, ಹಿರೀಸಾವೆ ಮತ್ತು ಬಾಗೂರು ಪ್ರದೇಶಗಳ ಬಹುತೇಕ ಕೆರೆಗಳಲ್ಲಿ ಇಂದು ನೀರು ತುಂಬಿದೆ. ಜನ ನನಗೆ ಕೊಟ್ಟ ಶಕ್ತಿಯನ್ನು ನಾನು ಅವರ ಸೇವೆಗಾಗಿ ವಿನಿಯೋಗಿಸಿದ್ದೇನೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಿದ ವೈಟ್ ಪೇಪರ್ ಸಂಸ್ಥೆಗೆ ಧನ್ಯವಾದಗಳು ಎಂದರು.
ವೈಟ್ ಪೇಪರ್ ಸಂಸ್ಥೆಯ ಸಂಪಾದಕರಾದ ವೆಂಕಟೇಶ ಆರ್.ದಾಸ್. ನಮ್ಮದೇ ಕ್ಷೇತ್ರದವರು. ಇವರು ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ನಮ್ಮ ತಾಲೂಕಿಗೆ ಹೆಮ್ಮೆ. ಹಿಂದೆ ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳಲ್ಲಿ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ವೈಟ್ ಪೇಪರ್ ಪತ್ರಿಕೆ ನಡೆಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಆಶಯದ ಬಗ್ಗೆ ಮಾತನಾಡಿ, ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಾ ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸುವ ಕೆಲಸವನ್ನು ವೈಟ್ ಪೇಪರ್ ಸಂಸ್ಥೆ ಮಾಡಿರುವುದು ಶ್ಲಾಘನೀಯ. ಇಲ್ಲಿ ನಮ್ಮ ಕ್ಷೇತ್ರ ಮತ್ತು ಜಿಲ್ಲೆಯವರು ಹೆಚ್ಚಾಗಿ ಇದ್ದಾರೆ. ಅವರೆಲ್ಲರಿಗೂ ನನ್ನ ಕೈಯ್ಯಿಂದ ಸನ್ಮಾನ ಮಾಡಿರುವುದು ನನಗೆ ಸಂತಸ ತಂದಿದೆ. ಸನ್ಮಾನಿತರು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಲಿ ಎಂದರು.

