ನವದೆಹಲಿ: ದೇಶದ 4ನೇ ಹಂತದ ಲೋಕಸಭಾ ಚುನಾವಣೆಗೆ ಸೋಮವಾರ ಮೇ 12 ರಂದು ಶಾಂತಿಯುತವಾಗಿ ಮತದಾನ ನಡೆದಿದೆ.
ದೇಶದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 96 ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಿತು. ಕೇಂದ್ರ ಚುನಾವಣಾ ಆಯೋಗದ ಮೂಲಗಳ ಪ್ರಕಾರ 4ನೇ ಹಂತದಲ್ಲಿ ಒಟ್ಟಾರೆ ಶೇಕಡಾ 67.25 ರಷ್ಟು ಮತದಾನ ನಡೆದಿದೆ.
4ನೇ ಹಂತದ 96 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1,717 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ತೆಲಂಗಾಣ 17, ಆಂಧ್ರಪ್ರದೇಶ 25, ಉತ್ತರಪ್ರದೇಶ 13, ಬಿಹಾರ 5, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ಪಶ್ಚಿಮ ಬಂಗಾಳ 8 ಹಾಗೂ ಜಮ್ಮು-ಕಾಶ್ಮೀರ 1 ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆದಿದೆ.
ಒಟ್ಟಾರೆ ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಕಳೆದ ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.
ಈಗಾಗಲೇ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 102, 2ನೇ ಹಂತದಲ್ಲಿ 87, 3ನೇ ಹಂತದಲ್ಲಿ 94 ಹಾಗೂ 4ನೇ ಹಂತದಲ್ಲಿ 96 ಕ್ಷೇತ್ರಗಳು ಸೇರಿ ಒಟ್ಟು 378 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಬಾಕಿ ಉಳಿದ 3 ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆದ ಬಳಿಕ ಜೂನ್ 4 ರಂದು ಈ ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.