ಆಂಧ್ರಪ್ರದೇಶ ರಾಜ್ಯದ 175 ಕ್ಷೇತ್ರಗಳಿಗೂ ಸೋಮವಾರ ಮೇ 13 ರಂದು ಮತದಾನ ನಡೆದಿದೆ.
ಒಟ್ಟು 175 ವಿಧಾನಸಭಾ ಕ್ಷೇತ್ರಗಳಿಗೆ ಸರಾಸರಿ ಶೇಕಡಾ 69 ರಷ್ಟು ಮತದಾನ ನಡೆದಿದೆ.
ಈ ಬಾರಿಯ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಏಕಾಂಗಿಯಾಗಿ ಕಣಕ್ಕಿಳಿದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಎಲ್ಲಾ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಹಾಗೂ ಬಿಜೆಪಿ ಮೂರು ಪಕ್ಷಗಳೂ ಒಂದಾಗಿ ಕಣಕ್ಕಿಳಿದಿದ್ದವು. ಹೀಗಾಗಿ ಈ ಬಾರಿಯ ಆಂಧ್ರಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.
ಆಂಧ್ರಪ್ರದೇಶದಲ್ಲಿ ಆಡಳಿತಾರೂಢ YSRCP ರಾಜ್ಯದ ಎಲ್ಲಾ 175 ವಿಧಾನಸಭಾ ಸ್ಥಾನಗಳು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಎನ್‌ಡಿಎ ಮೈತ್ರಿ ನಡುವಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಬಿಜೆಪಿ 10 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. 21 ವಿಧಾನಸಭಾ ಸ್ಥಾನಗಳಲ್ಲಿ ಜನಸೇನೆ ಸ್ಪರ್ಧಿಸುತ್ತಿದೆ.
ವೈಎಸ್‌ಆರ್‌ಸಿಪಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (ಪುಲಿವೆಂಡ್ಲ), ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು (ಕುಪ್ಪಂ) ಮತ್ತು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ (ಪಿಠಾಪುರಂ) ಸೇರಿ ಇತರರು ವಿಧಾನಸಭಾ ಚುನಾವಣೆಯ ರೇಸ್‌ನಲ್ಲಿದ್ದಾರೆ.