ರಾಜಕೀಯ ಸುದ್ದಿ

ಪನ್ನೂ ಹತ್ಯೆ ಸಂಚಿನ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ: ಶ್ವೇತ ಭವನ

Share It

ವಾಷಿಂಗ್ಟನ್: ಅಮೆರಿಕಾದಲ್ಲಿ ಸಿಖ್ ಪ್ರತ್ಯೇಕವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ಸಂಚಿನ ಆರೋಪಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ತಿಳಿಸಿದ್ದಾರೆ.

ಪನ್ನೂ ಹತ್ಯೆಯ ಸಂಚಿನಲ್ಲಿ ‘ರಾ’ ಅಧಿಕಾರಿ ವಿಕ್ರಮ್ ಯಾದವ್ ಅವರೂ ಭಾಗಿಯಾಗಿದ್ದು, ವಿಕ್ರಮ್ ಯಾದವ್ ಅವರು ಪನ್ನೂ ಹತ್ಯೆಯ ಸಂಚಿನ ಭಾಗವಾಗಲು ಆಗಿನ ಭಾರತೀಯ ಗುಪ್ತದಳ ಸಂಸ್ಥೆ ‘ರಾ’ ಮುಖ್ಯಸ್ಥ ಸಾಮಂತ್ ಗೋಯಲ್ ಅವರ ಅನುಮೋದನೆಯೂ ಸಹ ಸಿಕ್ಕಿತ್ತು ಎಂದು ‘ವಾಷಿಂಗ್ಟನ್ ಪೋಸ್ಟ್’ ದೈನಿಕ ವರದಿ ಮಾಡಿದೆ.

ಈ ಪ್ರಕರಣದ ತನಿಖಾ ವರದಿ ಬಗ್ಗೆ ಪ್ರತಿಕ್ರಿಯಿಸಿದ ಕರೀನ್: ಪನ್ನೂ ಹತ್ಯೆಯ ಸಂಚಿನಲ್ಲಿ ಭಾರತೀಯ ಗುಪ್ತದಳ ಸಂಸ್ಥೆಯ ‘ರಾ’ ಅಧಿಕಾರಿಗಳ ಪಾತ್ರ ಕುರಿತಂತೆ ತನಿಖೆ ನಡೆಯುತ್ತಿದೆ. ನ್ಯಾಯಾಂಗ ಇಲಾಖೆಯಿಂದಲೂ(ಡಿಓಜೆ) ಕ್ರಿಮಿನಲ್ ತನಿಖೆ ನಡೆಯುತ್ತಿದೆ ಎಂದರು.


ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಭಾರತ ಸರ್ಕಾರವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ‌‌. ಈ ಪ್ರಕರಣದ ಬಗ್ಗೆ ಭಾರತ ಸರ್ಕಾರಕ್ಕೆ ನಮ್ಮ ಕಳವಳವನ್ನು ಸಹ ನಾವು ವ್ಯಕ್ತಪಡಿಸಿದ್ದೇವೆ ಎಂದರು.

ಭಾರತವು ಅಮೆರಿಕಾದ ಪ್ರಮುಖ ಪಾಲುದಾರ ದೇಶವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ವಿಸ್ತರಿಸಲು ಮಹತ್ವಾಕಾಂಕ್ಷೆಯ ಕಾರ್ಯ ಸೂಚಿಯನ್ನು ಅನುಸರಿಸುತ್ತಿದ್ದೇವೆ ಎಂದರು.

ಕಳೆದ ವರ್ಷ ಜೂನ್ 18 ರಂದು ಕೆನಡಾ ದೇಶದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು, ಆ ಅವಧಿಯಲ್ಲಿ ಪನ್ನೂ ಹತ್ಯೆಗೂ ಸಂಚು ನಡೆದಿತ್ತು. ಈ ಹತ್ಯೆಯ ಕಾರ್ಯಾಚರಣೆಗೆ ವಿಕ್ರಮ್ ಯಾದವ್ ಅವರ ಸಂಪರ್ಕವಿದೆ ಎಂದು ವರದಿ ತಿಳಿಸಿದೆ.


Share It

You cannot copy content of this page