ರಾಜಕೀಯ ಸುದ್ದಿ

ಬೀದರ್ ನಗರದಲ್ಲಿ ಖಂಡ್ರೆ, ರಹೀಂಖಾನ್ ಭರ್ಜರಿ ಪ್ರಚಾರ

Share It

ಒಡೆದಾಳುವ ಬಿಜೆಪಿ ತಿರಸ್ಕರಿಸಿ, ಕಾಂಗ್ರೆಸ್ ಗೆಲ್ಲಿಸಿ: ಈಶ್ವರ ಖಂಡ್ರೆ
ಬೀದರ್: ತನ್ನ ಅಧಿಕಾರದ ದಾಹಕ್ಕಾಗಿ ಜಾತಿ, ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆದು ದೇಶದಲ್ಲಿ ದ್ವೇಷ ಹೆಚ್ಚಿಸುವ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿ ತಿರಸ್ಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.

ಬೀದರ್ ನಗರದ ಗುಮ್ಮ ಕಾಲೋನಿ, ಗಾದಗಿ, ಮಾಳಗಾಂವ್, ಮಂಗಲಪೇಟೆ ಸೇರಿ ಹಲವು ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ಪರ ಅಬ್ಬರದ ಪ್ರಚಾರ ನಡೆಸಿದ ಈಶ್ವರ ಖಂಡ್ರೆ, ಹಾಲಿ ಸಂಸದ ಭಗವಂತ ಖೂಬಾ ದುರ್ವರ್ತನೆ, ದರ್ಪ ತೋರುತ್ತಿದ್ದು, ಅವರ ನಿರಂತರ ಸುಳ್ಳು ಆಶ್ವಾಸನೆಗಳಿಂದ ಜನರು ಬೇಸತ್ತಿದ್ದಾರೆ. ಗೊಬ್ಬರ ಕೇಳಿದ ಶಿಕ್ಷಕರ ವಿರುದ್ಧ ಎಫ್.ಐ.ಆರ್. ಹಾಕಿಸಿದ ಸಂಸದರು ಜನ ಮತ್ತು ರೈತ ವಿರೋಧಿಯಾಗಿದ್ದಾರೆ ಎಂದರು.

ಈ ಬಾರಿ ಸೋಲು ಖಚಿತ ಎಂಬುದು ಬಿಜೆಪಿ ಮತ್ತು ಸಂಸದ ಭಗವಂತ ಖೂಬಾಗೆ ಮನವರಿಕೆ ಆಗಿದ್ದು, ಜನರಲ್ಲಿ ಆತಂಕ ಬರುವ ರೀತಿಯಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಕೋಮುವಾದಿಗಳನ್ನು ಕರೆತಂದು ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡಿಸುತ್ತಿದ್ದಾರೆ. ಇದು ಸೋಲಿನ ಹತಾಶಯ ಪ್ರತೀಕ ಎಂದು ಹೇಳಿದರು.

ಇಂದು ಬಿಜೆಪಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಸಂವಿಧಾನ ಬದಲಾವಣೆ ಮಾಡುವ ಷಡ್ಯಂತ್ರ ನಡೆಸಿದೆ. ಭಾರತದ ಮುಂದಿನ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದ್ದು, ಜನರು ಸಿಕ್ಕ ಅವಕಾಶ ಕೈಚೆಲ್ಲದೆ, ಸರ್ವಾಧಿಕಾರಿ ನಿಲುವು ಪ್ರದರ್ಶಿಸುತ್ತಿರುವ ಮತ್ತು ಬರಿ ಸುಳ್ಳುಗಳನ್ನೇ ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಭಗವಂತ ಖೂಬಾರನ್ನು ಸೋಲಿಸಿ ಮನೆಗೆ ಕಳಿಸಬೇಕು ಎಂದರು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜಾರಿಗೆ ತಂದು 1.10 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿದೆ, ಯುವಕರಿಗೆ ಸ್ವಾಭಿಮಾನದ ಬದುಕು ನೀಡಿದೆ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ 5 ನ್ಯಾಯ 25 ಗ್ಯಾರಂಟಿ ಜಾರಿಗೆ ತರುತ್ತೇವೆ. ಜನಗಣತಿ ಮಾಡಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತೇವೆ ಎಂದರು.

ಸಚಿವ ರಹೀಂಖಾನ್ ಮಾತನಾಡಿ, ಬೀದರ್ ತಮ್ಮ ಮತಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಹಕಾರದಿಂದ ಮಾಡಿರುವ ವಿವಿಧ ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು. ಸಂಸತ್ತು ಶಾಸನ ಸಭೆಯಾಗಿದ್ದು, ಇಲ್ಲಿ ಕಾನೂನು, ಕಾಯಿದೆ ರೂಪಿಸಲು ವಿಧೇಯಕ ಮಂಡಿಸುತ್ತಾರೆ. ಸ್ವತಃ ವಕೀಲರಾಗಿರುವ ಸಾಗರ್ ಖಂಡ್ರೆ ಗೆದ್ದರೆ ಅದರಿಂದ ದೇಶಕ್ಕೂ ಅನುಕೂಲವಾಗಲಿದೆ. ಬೀದರ್ ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಧ್ವನಿ ಬರುತ್ತದೆ ಎಂದರು.

ಕಾಂಗ್ರೆಸ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ಜಯಘೋಷ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸಾಗರ್ ಖಂಡ್ರೆ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೊರೆದು ಹಲವು ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಮುಖಂಡರಾದ ಅಮೃತ್ ರಾವ್ ಚಿಮಕೋಡ್ ಉಪಸ್ಥಿತರಿದ್ದರು


Share It

You cannot copy content of this page