ಐಟಿ-ಪೊಲೀಸರ ಜಂಟಿ ಕಾರ್ಯಾಚರಣೆ: 2 ಕೋಟಿ ರೂ. ವಶ
ಹುಬ್ಬಳ್ಳಿ, ಏಪ್ರಿಲ್ 15: ಐಟಿ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ಹಿನ್ನೆಲೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂ. ಗೂ ಹೆಚ್ಚು ನಗದು ಜಪ್ತಿ ಮಾಡಲಾಗಿದೆ. ನಿಂಗಪ್ಪ ಜಟಾದ್ ಎಂಬುವವರ ಮನೆಯಲ್ಲಿ ಮತದಾರರಿಗೆ ಹಂಚಲು 2 ಕೋಟಿ ರೂ. ಹೆಚ್ಚು ನಗದು ಸಂಗ್ರಹಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಚುನಾವಣಾ ನೀತಿ ಸಂಹಿತೆ ಹಾಗೂ ಅಬಕಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಲಾರಿಯಲ್ಲಿದ್ದ 16 ಲಕ್ಷ ರೂ. ಮೌಲ್ಯದ 9420 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ.
ಕೆಎಸ್ಬಿಸಿಎಲ್ ಡಿಪೋದಲ್ಲಿ ಲಾರಿಯೊಂದರಲ್ಲಿ ಇದ್ದ 650/500 ಎಂಎಲ್ನ 1100 ಬಿಯರ್ ಬಾಕ್ಸ ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ದಾಳಿ ಮಾಡಿದ್ದು, ಮದ್ಯ ಮತ್ತು ಮದ್ಯಸಾರ ಸಾಗಿಸುವ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಸದೇ ಸುತ್ತೋಲೆ ಉಲ್ಲಂಘಿಸಿರುವ ಕಾರಣ ವಾಹನ ಸಮೇತ ಮದ್ಯ ವಶಕ್ಕೆ ಪಡೆಯಲಾಗಿದೆ.
ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 34 ಲಕ್ಷ ರೂ. ಹಣ ಜಪ್ತಿ
ಕೊಪ್ಪಳ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 34 ಲಕ್ಷ ರೂ. ಹಣವನ್ನು ಪೊಲೀಸರು ಮತ್ತು ತಹಶಿಲ್ದಾರ್ ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಕೆಡೆಬಾಗಿಲು ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಕಾರ್ನಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲೂಕಿನ ನಡವಿಯಿಂದ ಹೊಸಪೇಟ್ಗೆ ಪೀರಸಾಭ್ ಅನ್ನೋರು ಹಣ ಸಾಗಿಸುತ್ತಿದ್ದರು. ಹಣಕ್ಕೆ ಯಾವುದೇ ದಾಖಲಾತಿಗಳು ಇಲ್ಲದೇ ಇರೋದರಿಂದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
5.60 ಕೋಟಿ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣ ವಶಕ್ಕೆ
ಬಳ್ಳಾರಿ: ನಗರದ ಬ್ರೂಸ್ಪೇಟೆ ಠಾಣೆ ಪೊಲೀಸರು ನಿನ್ನೆ ಭರ್ಜರಿ ಬೇಟೆ ಆಡಿದ್ದರು. ಚಿನ್ನದ ವ್ಯಾಪಾರಿ ನರೇಶ್ ಸೋನಿ ಮನೆಯಲ್ಲಿ, ದಾಖಲೆ ಇಲ್ಲದೆ ಇಟ್ಟಿದ್ದ 5.60 ಕೋಟಿ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣವನ್ನ ವಶಕ್ಕೆ ಪಡೆದಿದ್ದರು. ಹಣ ಚಿನ್ನಾಭರಣದ ಮೂಲ ಕೆದಕಿದ ಪೊಲೀಸರಿಗೆ, ಇದೆಲ್ಲ ಪ್ರಭಾವಿ ರಾಜಕಾರಣಿಗೆ ಸೇರಿದ್ದು ಸಂಶಯ ಕಾಡಿದೆ.
ಚುನಾವಣೆ ಬಳಕೆಗಾಗಿ ರಾಜಕಾರಣಿಯು ಹಣ ಕೊಟ್ಟಿರುವ ಶಂಕೆ ಎದ್ದಿದೆ. ಮತದಾರರಿಗೆ ಹಂಚಲು, ಹವಾಲಾ ದಂಧೆಯಲ್ಲಿ ಬಳಸಲು ಹಣವನ್ನ ಸಂಗ್ರಹಿಸಿದ್ದ ಸಂಶಯ ಮೂಡಿದ್ದು ತನಿಖೆ ಮುಂದುವರೆಸಿದ್ದಾರೆ.