ಚಿಕ್ಕಮಗಳೂರು: ಬೆಳಗ್ಗೆ ದಾವಣಗೆರೆಯಲ್ಲಿ ಮಳೆ, ನಂತರ ಬೆಳಗಾವಿ ಮತ್ತು ವಿಜಯಪುರದಲ್ಲೂ ಮಳೆ ಸುರಿದಿದೆ. ಇದೀಗ ಮಲೆನಾಡಿನ ಜಿಲ್ಲೆ ಚಿಕ್ಕಮಗಳೂರಲ್ಲಿ ಕೂಡ ಮಳೆಯಾಗುತ್ತಿದೆ.
ಬೆಳಗ್ಗೆ ದಾವಣಗೆರೆಯಲ್ಲಿ ಮಳೆಯಾದಾಗಲೇ ಜನರ ಮನಸ್ಸಿಗೆ ತಂಪೆನಿಸಿತ್ತು. ಅದರೆ ಹೊತ್ತು ಮೇಲೇರುತ್ತಿದ್ದಂತೆ ಬೆಳಗಾವಿ ಮತ್ತು ವಿಜಯಪುರದ ಕೆಲಭಾಗಗಳಲ್ಲಿ ಮಳೆ ಸುರಿದ ಸುದ್ದಿಗಳು ಲಭ್ಯವಾದವು. ಈಗ್ಗೆ ಸ್ವಲ್ಪ ಹೊತ್ತು ಮುಂಚೆ ಚಿಕ್ಕಮಗಳೂರಲ್ಲಿ ಮಳೆಯಾದ ಸುದ್ದಿ ಸಿಕ್ಕಿದೆ. ಮಳೆ ಸುರಿಯುತ್ತಿರುವ ದೃಶ್ಯಗಳನ್ನು ಜನರು ತಮ್ಮ ಮೊಬೈಲ್ ಗಳಲ್ಲಿ ಖುಷಿಯಿಂದ ಸೆರೆ ಹಿಡಿದಿದ್ದಾರೆ.
ಇವು ಬಿರು ಬೇಸಿಗೆಯ ದಿನಗಳು. ಇದರಿಂದ ರಾಜ್ಯದ ಅನೇಕ ಕಡೆಗಳಲ್ಲಿ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ನಮ್ಮ ಜೀವ ನದಿಗಳಾದ ಕಾವೇರಿ, ಕೃಷ್ಣೆ, ತುಂಗಭದ್ರಾ, ಭೀಮಾ ಹೀಗೆ ಹೆಚ್ಚು ಕಡಿಮೆ ಯಾವುದೇ ನದಿಗಳಲ್ಲಿ ನೀರಿಲ್ಲ. ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಪರಿಣಾಮ ಜನರಿಗೆ ಕುಡಿಯಲು ಸಹ ನೀರು ಸಿಗುತ್ತಿಲ್ಲ. 40 ಡಿಗ್ರಿಯಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾದರೂ ಮಳೆಯಾದ ಸುದ್ದಿ ಬಂದರೆ ಸಾಕು ಇತರೆ ಜಿಲ್ಲೆಗಳ ಜನರು ಸಂತಸಗೊಳ್ಳುತ್ತಿದ್ದಾರೆ.