ಅಹಮದಾಬಾದ್: ಬ್ಯಾಟಿಂಗ್ ನಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವು ಸಾಧಿಸಿ, ಟಾಟಾ ಐಪಿಎಲ್- 2024ರ ಫೈನಲ್ ಪ್ರವೇಶಿಸಿತು.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 19.3 ಓವರ್ ಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು. ಲೀಗ್ ಹಂತದ ಬಹುತೇಕ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹೈದರಾಬಾದ್ ಬ್ಯಾಟಿಂಗ್ ಪಡೆ ಮೊದಲ ಬಾರಿಗೆ ವೈಫಲ್ಯ ಅನುಭವಿಸಿತು.
ಆರಂಭಿಕರಾಗಿ ಬಂದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಬೇಗನೆ ಪೆವಿಲಿಯನ್ ಸೇರುವ ಮೂಲಕ ವೈಫಲ್ಯ ಅನುಭವಿಸಿದರು. ರಾಹುಲ್ ತ್ರಿಪಾಠಿ ಅರ್ಧಶತಕ ಸಿಡಿಸಿ, ತಂಡಕ್ಕೆ ಚೇತರಿಕೆ ನೀಡಿದರೆ, ಕ್ಲಾಸೆನ್ ತಕ್ಕ ಮಟ್ಟಿಗೆ ಒಳ್ಳೆಯ ಇನ್ನಿಂಗ್ಸ್ ಕಟ್ಟಿದರು. ಅಂತಿಮವಾಗಿ ಹೈದರಾಬಾದ್ ತಂಡ 159 ರನ್ ಗಳಿಗೆ ಅಲೌಟ್ ಆಯಿತು.
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೆಕೆಆರ್, ಸುನೀಲ್ ನರೇನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ನೆರವಿನಿಂದ ಕೇವಲ 2 ವಿಕೆಟ್ ನಷ್ಟಕ್ಕೆ ಕೇವಲ 13.4 ಓವರ್ ಳಲ್ಲಿ ಗುರಿ ಮುಟ್ಟಿತು. ಆ ಮೂಲಕ ಚೆನ್ನೈನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಇನ್ನು ಸೋತ ಎಸ್ ಆರ್ ಎಚ್ ತಂಡ ನಾಳೆ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡದ ಜತೆಗೆ ಸೆಣೆಸಾಡಲಿದ್ದು, ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಉಳಿಸಿಕೊಂಡಿದೆ.
ಇಂದು ಸಂಜೆ 7.30 ಕ್ಕೆ ಇದೇ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎಲೆಮಿನೇಟರ್ ಪಂದ್ಯ ನಡೆಯಲಿದ್ದು, ಸೋತ ತಂಡ ಮನೆ ಸೇರಲಿದೆ. ಗೆದ್ದವರು, ಇಂದು ಸೋತಿರುವ ಹೈದರಾಬಾದ್ ತಂಡದ ಜತೆಗೆ ಸೆಣೆಸಾಟ ನಡೆಸಿ, ಗೆದ್ದವರು ಕೊಲ್ಕತ್ತಾ ನೈಟ್ ರೈಡರ್ಸ್ ಜತೆಗೆ ಫೈನಲ್ ನಲ್ಲಿ ಆಡಲಿದ್ದಾರೆ.