ದೇವನಹಳ್ಳಿ: ಪದವೀಧರ ಕ್ಷೇತ್ರದ ಮತದಾರರಿಗೆ ಕೊರಿಯರ್ ಮೂಲಕ ಉಡುಗೊರೆಗಳನ್ನು ಕೊಟ್ಟು ಪ್ರಬುದ್ದ ಪದವೀಧರ ಮತದಾರರಿಗೆ ಆಮಿಷ ತೋರಿಸಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಯತ್ನಿಸುತ್ತಿರುವುದು ಖಂಡನೀಯ. ಪ್ರಬುದ್ಧ ಪದವೀಧರ ಕ್ಷೇತ್ರದ ಮತದಾರರು ಬಹಿಷ್ಕಾರ ಹಾಕಬೇಕು: ಎಂದು ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್ ಎಸ್ ಉದಯ್ ಸಿಂಗ್ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿ ಪದವೀಧರ ಮತದಾರರಲ್ಲಿ ಮತಯಾಚಿಸಿ ಪಕ್ಷೇತರ ಅಭ್ಯರ್ಥಿ ಆರ್ ಎಸ್ ಉದಯ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಪದವೀಧರ ಕ್ಷೇತ್ರದ ಮತದಾರರಿಗೆ ಕೊರಿಯರ್ ಮೂಲಕ ಉಡುಗೊರೆ ತಲುಪಿಸಲು ಅವರ ಭಾವಚಿತ್ರ ಮತ್ತು ಮತ ನೀಡಲು ಮಾಡಿಕೊಂಡ ಮನವಿಯ ಕರ ಪತ್ರಗಳನ್ನು ಚುನಾವಣಾ ನಿಗಾ ಘಟಕದ ಅಧಿಕಾರಿಗಳು ಜಪ್ತಿ ಮಾಡಿದ್ದು ದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಪದವೀಧರರ ಬಗ್ಗೆ ಸಮಾಜದಲ್ಲಿ ತಪ್ಪು ಭಾವನೆ ಉಂಟಾಗುವುದಲ್ಲದೆ, ಉಡುಗೊರೆಗಳನ್ನು ಪಡೆದು ಮತ ನೀಡುತ್ತಾರೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ.
ಇದು ಪದವೀಧರ ಗೌರವಕ್ಕೆ ಕಳಂಕ ತರುವಂತಹ ಕೃತ್ಯವಾಗಿದೆ ಇಂತವರನ್ನು ಪ್ರಬುದ್ಧ ಮತದಾರರು ತಿರಸ್ಕರಿಸಬೇಕು ಮೇಲ್ಮನೆಗೆ ಇಂತಹ ವ್ಯಕ್ತಿಗಳು ಆಯ್ಕೆಯಾದರೆ ಪದವೀಧರ ನಿಜವಾದ ಯಾವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ 12 ಸಾವಿರ ಶಿಕ್ಷಕರು ಮೃತಪಟ್ಟರು ಅಂತಹ ಕಷ್ಟ ಕಾಲದಲ್ಲಿ ನೆರವಿಗೆ ಬಾರದ ಇವರುಗಳು ಈಗ ಉಡುಗೊರೆ ಕೊಡಲು ಬಂದಿರುವುದು ಖಂಡನೀಯ.
ಬಿಜೆಪಿ ಅಭ್ಯರ್ಥಿ ಅ ದೇವೇಗೌಡ ಅವರು ಕಳೆದ ಆರು ವರ್ಷದಲ್ಲಿ ಆರು ನಿಮಿಷ ಕೂಡ ವಿಧಾನ ಪರಿಷತಿನಲ್ಲಿ ಪದವೀಧರ ಅಥವಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಕೆಪಿಎಸ್ ಸಿ ಯ ಹಗರಣಗಳ ಬಗ್ಗೆ ಯಾಗಲಿ ಸರ್ಕಾರದ ಮಟ್ಟದಲ್ಲಿ ಖಾಲಿ ಇರುವ ಸುಮಾರು 2.75 ಲಕ್ಷ ಉದ್ಯೋಗಗಳ ಬಗ್ಗೆ ಮಾತನಾಡಿಲ್ಲ ಇಂತವರಿಗೆ ಮತ ಕೇಳುವ ನೈತಿಕತೆಯ ಕೂಡ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.