ಬೌರಿಂಗ್ ಆಸ್ಪತ್ರೆಯಲ್ಲಿ ಎಚ್.ಡಿ.ರೇವಣ್ಣಗೆ ಮೆಡಿಕಲ್ ಟೆಸ್ಟ್
ಬೆಂಗಳೂರು: ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನವಾಗಿದೆ. ಇದೀಗ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಎಸ್‌ಐಟಿ ತೀರ್ಮಾನಿಸಿದೆ. ನ್ಯಾಯಾಧೀಶರ ಮುಂದೆ ಅವರನ್ನು ಒಂದು ವಾರಗಳ ಕಾಲ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಿದೆ.
ನ್ಯಾಯಾಧೀಶರು ರೇವಣ್ಣ ಅವರನ್ನು ಪೊಲೀಸ್ ಕಸ್ಟಡಿಗೆ ಕೊಡಲು ಒಪ್ಪದಿದ್ದರೆ, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆಯಿದೆ. ಒಂದು ವೇಳೆ ನ್ಯಾಯಾಂಗ ಬಂಧನಕ್ಕೆ ನೀಡಿದರೆ, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಎಸ್‌ಐಟಿ ವಿಚಾರಣೆ ವೇಳೆ ರೇವಣ್ಣ ತಮಗೂ ಆ ಮಹಿಳೆಗೂ ಯಾವುದೇ ಸಂಬAಧವಿಲ್ಲ ಎಂದು ಉತ್ತರ ನೀಡಿದ್ದಾರೆ. ನಮ್ಮ ಮನೆಯಲ್ಲಿ ಹಲವಾರು ಮಂದಿ ಹೆಂಗಸರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಆಕೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ವಿಚಾರಣೆ ನಂತರ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪರೀಕ್ಷೆಯ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.
ವೈದ್ಯಕೀಯ ಪರೀಕ್ಷೆಗೆ ಬಂದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಚ್.ಡಿ.ರೇವಣ್ಣ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆ. ನನ್ನ ಮೇಲೆ ಏಪ್ರಿಲ್ 28ಕ್ಕೆ ದೂರು ದಾಖಲು ಮಾಡಲಾಗುತ್ತದೆ. ಆದರೆ, ಮೇ 2 ರಂದು ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಈವರೆಗೆ ಯಾವುದೇ ಸಾಕ್ಷಿಗಳು ಅವರಿಗೆ ಸಿಕ್ಕಿಲ್ಲ, ಆದರೂ ನನ್ನನ್ನು ಬಂಧನ ಮಾಡಲಾಗಿದೆ. ಇದಕ್ಕೆಲ್ಲ ಉತ್ತರ ನೀಡಿಯೇ ನೀಡುತ್ತೇವೆ ಎಂದು ಕಿಡಿಕಾರಿದ್ದಾರೆ.


