ಅಪರಾಧ ಸುದ್ದಿ

ಅಕ್ರಮ ಗೋ ಸಾಗಾಟ: ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ

Share It

ಬೆಳಗಾವಿ, ಏಪ್ರಿಲ್​ 21: ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ 50ಕ್ಕೂ ಹೆಚ್ಚು ಹಿಂದೂ ಪರ ಕಾರ್ಯಕರ್ತರಿಂದ ಥಳಿಸುವ ಮೂಲಕ ನೈತಿಕ ಪೊಲೀಸ್​ಗಿರಿ ಮೆರೆದ ಘಟನೆ ಬೆಳಗಾವಿ ನಗರದ ಸುವರ್ಣ ಸೌಧ ಮುಂಭಾಗದಲ್ಲಿಯೇ ನಡೆದಿದೆ.

ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಲಾರಿಯನ್ನು ಹೆದ್ದಾರಿಯಲ್ಲೇ ತಡೆದು ಕಲ್ಲು ತೂರಿ, ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಎಂದು ಚಾಲಕನ ಮೇಲೆ ಹಿಂದೂ ಪರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕಾಸರಗೋಡು ಮೂಲದ ಲಾರಿ ಚಾಲಕ ಉಮರ್​ ಮೋಯಿದ್ದೀನ್​​ ಹಾಗೂ ಲಾರಿ ಚಾಲಕ ಉಮರ್ ಎಂಬುವರಿಗೆ ಧರ್ಮದೇಟು ಬಿದ್ದಿದೆ. ಈ ಇಬ್ಬರಿಗೂ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮತ್ತೋರ್ವ ಲಾರಿ ಚಾಲಕ ಸುನೀಲ್ ಕುಮಾರ್​ಗೂ ಗಾಯವಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ‌ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ-ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಅಕ್ರಮ ಗೋಸಾಗಾಟ ದಂಧೆ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಜೊತೆಗೆ ಶೆಟ್ಟರ್ ಅವರು ಉದ್ರಿಕ್ತ ಹಿಂದೂಪರ ಕಾರ್ಯಕರ್ತರನ್ನ ಸಮಾಧಾನಪಡಿಸಿದರು. ಈ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಶೆಟ್ಟರ್ ಅವರು ಪೋನ್ ಕರೆ ಮಾಡಿ ಮಾತನಾಡಿ, ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಡಿಸಿಪಿ ರೋಹನ್ ಜಗದೀಶ್ ಹೇಳಿದ್ದಿಷ್ಟು…
ಡಿಸಿಪಿ ರೋಹನ್ ಜಗದೀಶ್ ಪ್ರತಿಕ್ರಿಯಿಸಿದ್ದು, ಹಲ್ಲೆ ಮಾಡಿದವರ ಮೇಲೆ ಕೇಸ್ ದಾಖಲಿಸಿ ತನಿಖೆ ಮಾಡುತ್ತೇವೆ. ಸಂಜೆ 7 ಗಂಟೆಗೆ ಹಸು ಸಾಗಿಸುತ್ತಿದ್ದ ವಾಹನ ತಡೆಯಲಾಗಿದೆ. ಚಾಲಕ ಹಾಗೂ ಸ್ಥಳೀಯ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ಕಂಟ್ರೋಲ್ ಮಾಡಿದ್ದಾರೆ. ಯಮಕನಮರಡಿಯಿಂದ ಮುಂದೆ ಎಲ್ಲಿಗೆ ಲಾರಿ ಹೋಗುತ್ತಿತ್ತು ಅನ್ನೋ ಮಾಹಿತಿ ಪಡೆಯುತ್ತಿದ್ದೇವೆ‌. ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆ ಅವರ ಕುರಿತು ಪ್ರಕರಣ ದಾಖಲಾಗುತ್ತೆ‌‌‌. ಹಲ್ಲೆ ಮಾಡಿದವರ ಮೇಲೆಯೂ ಕೇಸ್ ದಾಖಲಿಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಒತ್ತಾಯ: ರಮಾಕಾಂತ್ ಕೊಂಡುಸ್ಕೂರ್
ಒಂದೇ ಲಾರಿಯಲ್ಲಿ 28 ಗೋವುಗಳ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ಎಲ್ಲ ಗೋವುಗಳನ್ನ ಕಮಕಾರಟ್ಟಿಯಲ್ಲಿರುವ ಮಹಾವೀರ ಗೋ ಶಾಲೆಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಗೋ ಶಾಲೆ ಬಳಿ ನೂರಾರು ಹಿಂದೂಪರ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಸಂಸ್ಥಾಪಕ ರಮಾಕಾಂತ್ ಕೊಂಡುಸ್ಕೂರ್ ಆಗಮಿಸಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ತರುವಂತೆ ಒತ್ತಾಯಿಸಿದ್ದಾರೆ.

ಪೊಲೀಸರು ಮಾಡದ ಕೆಲಸ ಹಿಂದೂ ಕಾರ್ಯಕರ್ತರು ಮಾಡುತ್ತಿದ್ದಾರೆ. ಕೇಸ್ ಆದ್ರೂ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಗೋ ಹತ್ಯೆ ಮಾಡಲು ಬಿಡಲ್ಲ. ಈ ಪ್ರಕರಣವನ್ನ ಯಾರು ಚುನಾವಣೆಗೆ ಬಳಸಿಕೊಳ್ಳಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಗೋವು ಉಳಿಸಲು ಏನೂ ಮಾಡುತ್ತಿಲ್ಲ. ಕಾಯ್ದೆಯನ್ನ ಕೂಡ ಜಾರಿಗೆ ತರ್ತಿಲ್ಲ ಅಂತಾ ಎರಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


Share It

You cannot copy content of this page