ಬೆಂಗಳೂರು : ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣಾ ಕಣಕ್ಕೆ ಅಂತಿಮ ದಿನಗಳು ಸಮೀಪಿಸಿವೆ. ಯಾವುದೇ ಅಕ್ರಮ ನಡೆಯದಂತೆ ಚೆಕ್ಪೋಸ್ಟ್ ನಿರ್ಮಿಸಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದರಂತೆ ನಿನ್ನೆ ಶನಿವಾರ (ಏಪ್ರಿಲ್ 20) ಬಿಜೆಪಿಗೆ ಸೇರಿದ ಸುಮಾರು 2 ಕೋಟಿ ರೂ.ಗಳಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಬೆಂಗಳೂರಿನ ಬಿನ್ನಿಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಕುರಿತು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಇನ್ನು ಪ್ರಾಥಮಿಕ ತನಿಖೆಯಲ್ಲಿ ಈ ಹಣವು ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು ಎಂದು ತಿಳಿದುಬಂದ ಹಿನ್ನಲೆ ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ಪದಾಧಿಕಾರಿಗಳನ್ನು ಕರೆಸಿ ತನಿಖೆ ನಡೆಸಿದೆ. ಈ ವೇಳೆ ಹಣದ ಮೂಲವು ಸರಿಯಾಗಿರುವುದರಿಂದ ಐಟಿ ಕಾನೂನಿನ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನಿಸಿದೆ.
ಆದರೆ, ಇಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ರಾಜಕೀಯ ಚಟುವಟಿಕೆಗಳಿಗಾಗಿ ನೀಡಿದ 10 ಸಾವಿರ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಚೆಕ್ ಅಥವಾ ಆನ್‌ಲೈನ್ ಮೂಲಕ ಮಾಡಲಾಗುತ್ತದೆ. ರಾಜಕೀಯ ಪಕ್ಷಗಳು ಭಾರೀ ಪ್ರಮಾಣದ ಹಣವನ್ನು ಕೊಂಡೊಯ್ಯದಂತೆ ಇಸಿಐ ಸಲಹೆ ನೀಡಿದೆ. ಆದರೆ, ಈ ಹಣವನ್ನು ಚುನಾವಣೆಯಲ್ಲಿ ಪ್ರಚೋದನೆಗಳಿಗೆ ಬಳಸಬಹುದೆಂಬ ಶಂಕೆಯ ಆಧಾರದ ಮೇಲೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಾಹನ ಚಲಾಯಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಸಹ ಪ್ರಯಾಣಿಕ ಗಂಗಾಧರ್ ಎಂಬುವವರ ಮೇಲೆ ಐಪಿಸಿ ಸೆಕ್ಷನ್ 1860 (171E, 171F, 171B, 171C); ಪ್ರಜಾ ಪ್ರತಿನಿಧಿ ಕಾಯ್ದೆಯ 1950, 1951 & 1989 (U/s-123) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ಹಣವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.