ಬಾಗೇಪಲ್ಲಿ, ಏ, 21; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿ ಬಿರುಗಾಳಿ ಎಬ್ಬಿಸಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಸುಬ್ಬಾರೆಡ್ಡಿ ನೇತೃತ್ವದಲ್ಲಿ ರಕ್ಷಾ ರಾಮಯ್ಯ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಮತಯಾಚಿಸಿದರು. ಇದರಿಂದ ಕೈ ಕಾರ್ಯಕರ್ತರ ಉತ್ಸಾಹ, ಹುಮ್ಮಸ್ಸು ಇಮ್ಮಡಿಗೊಂಡಿದ್ದು ಬಾಗೇಪಲ್ಲಿಯಲ್ಲಿ ಜನ ಸಾಗರವೇ ಹರಿದುಬಂದಿತ್ತು.
ಈ ವೇಳೆ ಪಾತಪಾಳ್ಯದ ಮಹಿಳೆಯರು ಕಳಶ ಹೊತ್ತು ರಕ್ಷಾರಾಮಯ್ಯ ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ರಕ್ಷಾ ರಾಮಯ್ಯ ಅವರ ಹಣೆಗೆ ತಿಲಕವಿಟ್ಟು ವಿಜಯಶಾಲಿಯಾಗುವಂತೆ ಹರಸಿದರು.
ಬಿಸಿಲ ಧಗೆಯಲ್ಲೂ ಕಾರ್ಯಕರ್ತರ ಉತ್ಸಾಹ ಬತ್ತಲಿಲ್ಲ. ಬೆಳಗಿನಿಂದಲೇ ಕೈ ಕಾರ್ಯಕರ್ತರ ದಂಡು ತೊರೆ ತೊರೆಯಾಗಿ ನೀರಿನಂತೆ ಹರಿದು ಸರೋವರ, ನದಿ ಸೇರುವಂತೆ ಬಾಗೇಪಲ್ಲಿಗೆ ಆಗಮಿಸಿತು. ಎಪಿಎಂಸಿ ಮಾರುಕಟ್ಟೆ, ಪಾತಪಾಳ್ಯ, ಚೇಳೂರು ಭಾಗದಲ್ಲಿ ರಕ್ಷಾ ರಾಮಯ್ಯ ಬಿರುಸಿನಿಂದ ಪ್ರಚಾರ ನಡೆಸಿದರು. ತಿಮ್ಮಂಪಲ್ಲಿ, ಗೋಳೂರು, ಮಿಟ್ಟೆಮರಿ, ಸೋಮೇನಹಳ್ಳಿ, ಗುಡಿಬಂಡೆ ಪಟ್ಟಣದಲ್ಲಿ ಭಾರೀ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ರಕ್ಷಾ ರಾಮಯ್ಯ ಅವರ ಚುನಾವಣಾ ಪ್ರಚಾರ ವಾಹನದುದ್ದಕ್ಕೂ ಪಕ್ಷದ ಕಾರ್ಯಕರ್ತರು, ಉತ್ಸಾಹಿ ಯುವ ಜನತೆ ಸಾಗಿ ಜೈಕಾರ ಮೊಳಗಿಸಿತು.
ಮತದಾರರನ್ನುದ್ದೇಶಿಸಿ ಮಾತನಾಡಿದ ರಕ್ಷಾ ರಾಮಯ್ಯ, ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಬಾಧಿತರಾಗಿದ್ದಾರೆ. ಜನರ ಸಮಸ್ಯೆಗಳನ್ನು ನಿವಾರಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ನಿಮ್ಮ ನಿರಂತರ ಸೇವೆಗಾಗಿ ಕಾಂಗ್ರೆಸ್ ಬೆಂಬಲಿಸಿ, ಹೆಚ್ಚಿನ ಮತ ನೀಡಿ ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ಕೋಟಿ ಉದ್ಯೋಗವನ್ನು ಸಹ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಯುವ ಜನಾಂಗಕ್ಕೆ ಪರಮ ಅನ್ಯಾಯ ಮಾಡಿದೆ. ಬಡವರ ಹೊಟ್ಟೆಗೆ ಹೊಡೆಯುವ ಪಕ್ಷ ಎಂದರೆ ಅದು ಬಿಜೆಪಿ. ನರೇಂದ್ರ ಮೋದಿ ಅವರು ರಾಜ್ಯಕ್ಕೆ ನೀಡಿದ್ದು “ಚೊಂಬು”. ಎರಡು ದಿನಗಳಿಂದ ನಡೆಯುತ್ತಿರುವ ಚೊಂಬಿನ ಪುರಾಣವನ್ನು ಪ್ರತಿಯೊಬ್ಬರೂ ಗಮನಿಸುತ್ತಿದ್ದು, ಈ ಬಗ್ಗೆ ನೀವೇ ಚರ್ಚೆ ಮಾಡಿ ಮತದಾರರಿಗೆ ರಕ್ಷಾ ರಾಮಯ್ಯ ಕರೆ ನೀಡಿದರು.
ಈ ಚುನಾವಣೆ ಮಹತ್ವದ ಚುನಾವಣೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಪ್ರತಿಯೊಂದು ಕುಟುಂಬಕ್ಕೆ ತಲುಪುತ್ತಿದ್ದು, ಇದರಿಂದ ಅನುಕೂಲವಾಗುತ್ತಿದೆ. ಚಿಕ್ಕಬಳ್ಳಾಪುರಕ್ಕೆ ನಾನು ಅಭ್ಯರ್ಥಿಯಾಗಿರುವುದು ನಿಮಿತ್ತ ಮಾತ್ರ. ನಿಜವಾದ ಅಭ್ಯರ್ಥಿಗಳು ನೀವು. ನಿಮ್ಮ ಸೇವೆ ಮಾಡಲು, ಮನೆಯ ಮಗನಾಗಿ ದುಡಿಯಲು ನನಗೆ ಅವಕಾಶ ಮಾಡಿಕೊಡಿ ಎಂದು ರಕ್ಷಾ ರಾಮಯ್ಯ ಭಾವನಾತ್ಮಕವಾಗಿ ಮನವಿ ಮಾಡಿದರು.
ಬಿಜೆಪಿ ಎಂದರೆ ಶ್ರೀಮಂತರ ಪಕ್ಷ. ಅದಾನಿ, ಅಂಬಾನಿ ಅವರ ಪಕ್ಷ. ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ ಯುವ ಜನಾಂಗ, ಮಹಿಳೆಯರು, ರೈತರ ರಕ್ಷಣೆ ಮಾಡುವ ಪಕ್ಷವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬಕ್ಕೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೆರವು ನೀಡಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರತಿಯೊಬ್ಬರ ಖಾತೆಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಲಭಿಸಲಿದೆ. ಮಹಿಳೆಯರ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಪಕ್ಷ ಮಹಿಳಾ ಸಮುದಾಯಕ್ಕೆ ಈ ಮೂಲಕ ಅಳಿಲು ಸೇವೆ ಸಲ್ಲಿಸಲಿದೆ ಎಂದು ಹೇಳಿದರು.