ಮೈಸೂರು: ಇತ್ತೀಚೆಗೆ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿ ಮೈಸೂರು ಪ್ರಾಂತ್ಯದ ಲೋಕಸಭಾ ಚುನಾವಣೆಗೆ ಎನ್.ಡಿ.ಎ ಪರ ಪ್ರಚಾರ ನಡೆಸಿದ್ದರು. ಅಗ ಪ್ರಧಾನಿ ಮೋದಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಮೈಸೂರು-ಕೊಡಗು ಕ್ಷೇತ್ರದ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಮತಯಾಚನೆ ಮಾಡಿದ್ದರು. ಇದೀಗ ಲೋಕಸಭಾ ಚುನಾವಣಾ ವಿಚಾರಗಳ ಬಗ್ಗೆ ಮಾಹಿತಿಯನ್ನೊಳಗೊಂಡಿರುವ ಮುಂದೆ ಯಾವ ರೀತಿ ಕೆಲಸ ಮಾಡಬೇಕು? ಎಂಬ ಬಗ್ಗೆ ಯದುವೀರ್ ಒಡೆಯರ್ ಅವರಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.
ಮೋದಿ ಬರೆದ ಪತ್ರದಲ್ಲೇನಿದೆ?
“ನನ್ನ ಸಹೋದ್ಯೋಗಿ ಯದುವೀರ್ ಜೀ” ಎಂದು ಪತ್ರ ಆರಂಭಸಿರುವ ಮೋದಿ, ಈ ಪತ್ರ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತೆ ಎಂದು ಭಾವಿಸುವೆ. ನೀವು ನೇರವಾಗಿ ಜನರ ಸೇವೆ ಮಾಡುವ ಮೂಲಕ ಮೈಸೂರಿನ ಒಡೆಯರ ಪರಂಪರೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೆ. ಸುಸ್ಥಿರ ಅಭಿವೃದ್ಧಿ, ಶಿಕ್ಷಣಕ್ಕಾಗಿ ನಿಮ್ಮ ಸಮರ್ಪಣೆ ಸ್ಪಷ್ಟವಾಗಿದೆ. ಜನರ ಆಶೀರ್ವಾದದಿಂದ ನೀವು ಸಂಸತ್ತಿಗೆ ಬರುತ್ತೀರಿ ಎಂಬ ವಿಶ್ವಾಸವಿದೆ. ನಿಮ್ಮಂತಹ ತಂಡದ ಸದಸ್ಯರು ನನಗೆ ದೊಡ್ಡ ಆಸ್ತಿ. ಒಂದು ತಂಡವಾಗಿ, ನಿಮ್ಮ ಕ್ಷೇತ್ರ ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಜನತೆಗೆ ಇದು ಮಾಮೂಲಿ ಚುನಾವಣೆಯಲ್ಲ ಎಂದು ಹೇಳ ಬಯಸುತ್ತೇನೆ. ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಈ ಚುನಾವಣೆಯು ನಮ್ಮ ಧ್ಯೇಯದಲ್ಲಿ ನಿರ್ಣಾಯಕವಾಗಿರುತ್ತದೆ. ಬಿಜೆಪಿ ಪಡೆಯುವ ಪ್ರತಿ ಮತವು ಸ್ಥಿರ ಸರ್ಕಾರ ರಚಿಸುವತ್ತ ಸಾಗುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಪಯಣಕ್ಕೆ ವೇಗ ನೀಡುತ್ತೆ ಎಂದು ಹೇಳಿದ್ದಾರೆ.
“ಬೇಸಿಗೆ ಬಿಸಿ ಎಲ್ಲರಿಗೂ ಸಮಸ್ಯೆ ಉಂಟುಮಾಡುತ್ತದೆ ಎಂದು ನನಗೆ ತಿಳಿದಿದೆ. ಆದರೆ ಈ ಚುನಾವಣೆ ನಮ್ಮ ದೇಶದ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಬಿಸಿಲಿನ ತಾಪಕ್ಕೂ ಮುನ್ನವೇ ಮತದಾರರು ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ನನ್ನ ಪ್ರತಿ ಕ್ಷಣವನ್ನು ನನ್ನ ಸಹ ನಾಗರಿಕರ ಕಲ್ಯಾಣಕ್ಕಾಗಿ ಮೀಸಲಿಡುವೆ. ಈ ಭರವಸೆಯನ್ನು ಪ್ರತಿಯೊಬ್ಬರಿಗೆ ತಿಳಿಸಲು ನಿಮ್ಮನ್ನು ಒತ್ತಾಯಿಸುವೆ. ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ನನ್ನ ಶುಭಾಶಯ ಕಳಿಸಿದ್ದೇನೆ” ಎಂದು ಯದುವೀರ್ ಒಡೆಯರ್ ಅವರಿಗೆ ಬರೆದ ಪತ್ರದಲ್ಲಿ ಮೋದಿ ಅವರು ಶುಭ ಹಾರೈಸಿದ್ದಾರೆ.