ರಾಜಕೀಯ ಸುದ್ದಿ

ರಾಯಚೂರು ಬಿಜೆಪಿ ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತ!

Share It

ರಾಯಚೂರು: ರಾಯಚೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿವಿ ನಾಯಕ್‌ ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿ ಪಕ್ಷದಿಂದಲೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ತಾಂತ್ರಿಕ ಕಾರಣಗಳಿಂದ ಬಿ.ವಿ.ನಾಯಕ್ ಅವರ ನಾಮಪತ್ರ ತಿರಸ್ಕತವಾಗಿದೆ. ನಾಮಪತ್ರ ಪರಿಷ್ಕರಣೆ ವೇಳೆ ಬಿ.ವಿ. ನಾಯಕ್‌ ನಾಮಪತ್ರ ತಿರಸ್ಕೃತಗೊಂಡಿದೆ.

ಬಿಜೆಪಿಯಿಂದಲೇ ಬಿವಿ ನಾಯಕ್‌ ನಾಮಪತ್ರ ಸಲ್ಲಿಸಿದ್ದರಿಂದ ಎ.ಬಿ ಫಾರ್ಮ್‌ ಇರಲಿಲ್ಲ. ಒಂದು ವೇಳೆ ಫಾರ್ಮ್‌ ಇಲ್ಲದ ಪಕ್ಷದಲ್ಲಿ 10 ಜನ ಸೂಚಕರು ಇವರ ಪರ ಇರಬೇಕು. ಆದರೆ ಬಿ.ವಿ ನಾಯಕ್‌ ಪರ ಓರ್ವ ಸೂಚಕ ಮಾತ್ರ ಇದ್ದರು. ಇದೇ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ್‌ ನಾಯಕ್‌ ಹೇಳಿದ್ದಾರೆ.

ಬಂಡಾಯ ಅಭ್ಯರ್ಥಿ ಬಿ.ವಿ ನಾಯಕ್‌ ನಾಮಪತ್ರ ತಿರಸ್ಕೃತಗೊಂಡಿರುವ ಕಾರಣ, ಬಿಜೆಪಿ ಪಾಳಯ ನಿಟ್ಟುಸಿರು ಬಿಟ್ಟಿದೆ. ಬಿ.ವಿ ನಾಯಕ್ ಬಂಡಾಯದಿಂದ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಗೆಟಿವ್‌ ಅಲೆ ಶುರುವಾಗಿತ್ತು. ಆದರೀಗ ನಾಮಪತ್ರ ತಿರಸ್ಕೃತಗೊಂಡಿರೊ ಹಿನ್ನೆಲೆ ಬಿಜೆಪಿ ಪಾಳಯಕ್ಕೆ ಮತ್ತಷ್ಟು ಶಕ್ತಿಬಂದಂತಾಗಿದೆ. ಈಗಾಗಲೇ ವರಿಷ್ಠರ ಸಂಧಾನಕ್ಕೆ ಒಪ್ಪಿದ್ದ ಬಿ.ವಿ ನಾಯಕ್‌ ಇನ್ಮುಂದೆ ಬಿಜೆಪಿ ಪರ ಪ್ರಚಾರಕ್ಕಿಳಿಯುತ್ತಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿ.ವಿ ನಾಯಕ್‌ ರನ್ನ ಶತಾಯಗತಾಯ ಫೀಲ್ಡ್ ಗೆ ಕರೆತಂದು ಪ್ರಚಾರ ಮಾಡಬೇಕು ಅಂತ ಜಿಲ್ಲಾ ಘಟಕ ಹರಸಾಹಸ ಪಡ್ತಿದೆ. ಈ ಮಧ್ಯೆ ಬಿ.ವಿ ನಾಯಕ್‌ ನಾಮಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್‌ ನಾಯಕ್‌ ನಿರಾಕರಿಸಿದ್ದು, ಅದು ಅವರ ವೈಯಕ್ತಿಕ ಅಂತ ಹೇಳ್ತಿದ್ದಾರೆ. ಒಟ್ಟಿನಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಬಿ.ವಿ ನಾಯಕ್‌ ಬಿಜೆಪಿ ಪರ ಬ್ಯಾಟ್‌ ಬೀಸ್ತಾರಾ? ಇಲ್ಲಾ ಒಳಹೊಡೆತ ಕೊಡ್ತಾರಾ? ಅನ್ನೋದೇ ಕುತೂಹಲ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದ ಹಿನ್ನೆಲೆ ಬಿ.ವಿ ನಾಯಕ್‌ ಕೆರಳಿದ್ದರು. ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿ.ವಿ ನಾಯಕ್‌ ರಾಜ್ಯ,ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ ಇದರಿಂದ ಟಿಕೆಟ್‌ ಬದಲಾವಣೆ ಆಗಿರಲಿಲ್ಲ.

ಈ ಮಧ್ಯೆ ಬಿ.ವಿ ನಾಯಕ್‌ ಬಂಡಾಯ ತಣಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ ಹರಸಾಹಸ ಪಟ್ಟಿದ್ದರು. ಖುದ್ದು ರಾಯಚೂರಿಗೆ ಆಗಮಿಸಿದ್ದ ರಾಧಾ ಮೋಹನ್ ದಾಸ್ ಅಗರವಾಲ್‌ ಅವರು ಬಿ.ವಿ ನಾಯಕ್‌ ಮನವೊಲಿಸಿ ಅವರ ಮೂಲಕವೇ ರಾಜಾ ಅಮರೇಶ್ವರ ನಾಯಕ್‌ಗೆ ಬಿ. ಫಾರ್ಮ್‌ ಕೊಡಿಸಿದ್ದರು. ಇದಾದ ಬಳಿಕ ಎಲ್ಲವೂ ತಣ್ಣಗಾಯ್ತು ಅಂತ ಭಾವಿಸಲಾಗಿತ್ತು. ಆದರೆ ಆಗಿದ್ದೇ ಬೇರೆ.

ರಾಯಚೂರು ಹಾಲಿ ಸಂಸದ ಹಾಗೂ ಬಿಜೆಪಿಯ ಘೋಷಿತ ಅಭ್ಯರ್ಥಿ ರಾಜಾ ಅಮರೇಶ್ವರ್‌ ನಾಯಕ್‌ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಬಿ.ವಿ ನಾಯಕ್‌ ಬಂಡಾಯವೆದ್ದು ಅಜ್ಞಾತ ಸ್ಥಳದಿಂದಲೇ ತಮ್ಮ ಸೂಚಕರ ಮೂಲಕ ನಾಮಪತ್ರ ಸಲ್ಲಿಸಿದ್ದರು. ಅಚ್ಚರಿ ಅಂದ್ರೆ ಬಿ.ವಿ ನಾಯಕ್‌ ಕೂಡ ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದರು. ಇದೀಗ ಬಿ‌.ವಿ‌.ನಾಯಕ್ ಅವರ ನಾಮಪತ್ರ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಮತ್ತು ರಾಯಚೂರು ಜಿಲ್ಲೆಯ ಬಿಜೆಪಿ ಘಟಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


Share It

You cannot copy content of this page