ಬೆಂಗಳೂರು
ಕನ್ಮಡ ಹೋರಾಟಗಾರರ ಅರ್ಹತೆ ಬಗ್ಗೆ ಲಘುವಾಗಿ ಮಾತನಾಡಿದ್ದ ನಿರೂಪಕ, ನಟ ನಿರಂಜನ್ ದೇಶಪಾಂಡೆ ವಿರುದ್ಧ ಕನ್ನಡಿಗರು ಮುಗಿಬಿದ್ದಿದ್ದಾರೆ.
ನಿರಂಜನ್ ದೇಶಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಮಾತನ್ನಾಡುತ್ತಾ, ಕನ್ನಡ ಹೋರಾಟಗಾರರು, ಮಾತೆತ್ತಿದ್ದರೆ ಕನ್ನಡ ಹೋರಾಟ ಎಂದು ಬಂದು ಬಿಡ್ತಾರೆ. ಆದರೆ, ಅವರಿಗೆ ಕನ್ನಡದಲ್ಲಿ ಯಾವುದೇ ಪಾಂಡಿತ್ಯ ಇರುವುದಿಲ್ಲ. ಕನ್ನಡದ ಬಗ್ಗೆ ಏನೋನು ಗೊತ್ತಿರುವುದಿಲ್ಲ. ಸುಮ್ಮನೆ ಬಿಲ್ಡಪ್ ಗೆ ಬಂದು ಹೋರಾಟ ಮಾಡ್ತಾರೆ ಎಂದು ಟೀಕಿಸಿದ್ದರು.
ದೇಶಪಾಂಡೆ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಅವರ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿತ್ತು. ಕನ್ನಡ ಹೋರಾಟ ಮಾಡಲು ಭಾಷೆಯಲ್ಲಿ ಪಾಂಡಿತ್ಯ ಸಾಧಿಸಬೇಕಾಗಿಲ್ಲ, ಕನ್ನಡ ಪ್ರೇಮ ಇದ್ದರೆ ಸಾಕು, ಭಾಷೆ ಮೇಲೆ ಅಭಿಮಾನ ಇರಿವ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಹೋರಾಟಗಾರನೇ ಎಂದು ಉತ್ತರ ನೀಡಿದ್ದಾರೆ.
ಮತ್ತೆ ಕೆಲವರು ಹೋರಾಟ ಮಾಡುವವರ ಯೋಗ್ಯತೆ ಅರ್ಹತೆ ಬಗ್ಗೆ ಮಾತನಾಡುವ ನಿರಂಜನ್ ದೇಶಪಾಂಡೆ ಅವರೇ, ನಿಮಗೆ ಗೊತ್ತಿರಲಿ ಕನ್ನಡದ ಅಸ್ಮಿತೆಗಾಗಿ ನಡೆದ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದ ಡಾ. ರಾಜ್ ಕುಮಾರ್ ಪಂಡಿತರಾಗಿರಲಿಲ್ಲ, ಅವರ ಯೋಗ್ಯತೆ ಬಗ್ಹೆ ಮಾತನಾಡುವಷ್ಟು ನೀವು ದೊಡ್ಡವರಾ ಎಂದು ಪ್ರಶ್ನೆ ಮಾಡಿದ್ದಾರೆ.
ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮತ್ತೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ನಿರಂಜನ್ ದೇಶಪಾಂಡೆ, ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಕನ್ನಡ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನ್ನಾಡಿದ್ದಕ್ಕೆ ಕ್ಷಮೆ ಇರಲಿ, ಎಂದಿಗೂ ಕನ್ನಡ, ಭಾಷೆ, ನೆಲ ಜಲದ ಬಗ್ಗೆ ದುಡಿಯುವವರ ಮೇಲೆ ಅಭಿಮಾನವಿದೆ. ನನ್ನಿಂದ ಆಗಿರುವ ತಪ್ಪಿಗೆ ಕ್ಷಮೆ ಇರಲಿ ಎಂದು ಬೇಡಿಕೊಂಡಿದ್ದಾರೆ.