ಬೆಂಗಳೂರು,ಏ.21: ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ಎನ್‌ಐಎ ಅಧಿಕಾರಿಗಳಿಗೆ ಬಾಂಬ್ ಸ್ಫೋಟಿಸಲು ಪಾಕಿಸ್ತಾನ ಪಿತೂರಿ ನಡೆಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ರಾಮೇಶ್ವರ ಕೆಫೆ ಬಾಂಬ್ ಸ್ಫೋಟದ ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಜೀಬ್ ಅವರು ಪಾಕಿಸ್ತಾನದ ಜತೆ ನಂಟು ಹೊಂದಿದ್ದ ಮಾಹಿತಿ ಲಭ್ಯವಾಗಿದೆ.
ಈ ಬಾಂಬ್ ದಾಳಿಯ ರೂವಾರಿಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಜೀಬ್ ಅವರು ಪಾಕಿಸ್ತಾನದ ಕರ್ನಲ್ ಎಂಬ ಗೌಪ್ಯ ಹೆಸರು ಹೊಂದಿರುವವನ ಜತೆ ನಂಟು ಹೊಂದಿರುವುದು, ಅಷ್ಟೇ ಅಲ್ಲ, ಐಎಸ್ ಅಲ್-ಹಿಂದ್ ಎಂಬ ಉಗ್ರ ಸಂಘಟನೆ ಜತೆ ಇವರು 2019-20 ರಿಂದಲೂ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಎನ್‌ಐಎಗೆ ಲಭ್ಯವಾಗಿದೆ.
ಹಾಗಾಗಿ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನದ ನಂಟಿನ ಕುರಿತು ಎನ್‌ಐಎ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಲ್ ಎಂಬ ಕೋಡ್ ನೇಮ್ ಇರುವ ಶಂಕಿತನಿಗೂ, 2022ರಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೂ ನಂಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಬುಧಾಬಿಯಲ್ಲಿರುವ ಕರ್ನಲ್ ಎಂಬ ಶಂಕಿತ ಉಗ್ರನ ಹೆಸರು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ಬಯಲಾಗಿದೆ. ಈತನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿದ್ದು, ಭಾರತದಲ್ಲಿ ಬಾಂಬ್ ದಾಳಿಗಳಿಗೆ ಪಿತೂರಿ ನಡೆಸುತ್ತಿದ್ದಾನೆ. ಇಸ್ಲಾಮಿಕ್ ಸ್ಟೇಟ್‌ನ ಸಣ್ಣ ಗುಂಪುಗಳನ್ನು ರಚಿಸಿ, ಅವುಗಳಿಗೆ ಸ್ಥಳೀಯ ಯುವಕರನ್ನು ನೇಮಿಸುವುದು ಈತನ ಕೆಲಸ ಎಂದು ತಿಳಿದುಬಂದಿದೆ.
2023ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಉಗ್ರರ ಜಾಲವೊಂದನ್ನು ಭೇದಿಸಿದ್ದರು. ದೇಶಾದ್ಯಂತ ಇಂತಹ ಸಣ್ಣ ಗುಂಪುಗಳನ್ನು ರಚಿಸಿ, ಅವುಗಳಿಗೆ ಯುವಕರನ್ನು ನೇಮಿಸಿ, ಭಾರತದಲ್ಲಿ ಬಾಂಬ್ ದಾಳಿ ನಡೆಸುವುದು ಈತನ ಸಂಚಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಸಂಭವಿಸಿದ ಸ್ಫೋಟದ ಹಿಂದೆಯೂ ಈತನ ಕೈವಾಡ ಇದೆ ಎಂಬುದಾಗಿ ಎನ್‌ಐಎಗೆ ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.