ರಾಜಕೀಯ ಸುದ್ದಿ

ಪರಿಷತ್ ಶಿಕ್ಷಕರು ಮತ್ತು ಪದವೀಧರ ಚುನಾವಣೆ: 6 ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಿದ ಬಿಜೆಪಿ

Share It

ಬೆಂಗಳೂರು, ಮೇ 17: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ. ಇದೀಗ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಗೆ ಭರ್ಜರಿ ಸಿದ್ಧತೆಯೇ ನಡೆಯುತ್ತಿದೆ. ವಿಧಾನಪರಿಷತ್​ಗೆ ಈಶಾನ್ಯ, ನೈಋತ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ, ದಕ್ಷಿಣ ಶಿಕ್ಷಕರ ಕ್ಷೇತ್ರಗಳು ಸೇರಿ ಒಟ್ಟು 6 ಕ್ಷೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಪರಿಷತ್‌ನ 6 ಕ್ಷೇತ್ರಗಳಿಗೆ ಬಿಜೆಪಿ ಪಕ್ಷ ಉಸ್ತುವಾರಿಗಳ ನೇಮಕ ಮಾಡಿದೆ.

6 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ ಇಂತಿದೆ…

ಈಶಾನ್ಯ ಪದವೀಧರ ಕ್ಷೇತ್ರ: ವಿರೋಧ ಪಕ್ಷ ಮುಖ್ಯ ಸಚೇತಕ ರವಿಕುಮಾರ್​

ನೈಋತ್ಯ ಪದವೀಧರ, ನೈಋತ್ಯ ಶಿಕ್ಷಕರ ಕ್ಷೇತ್ರ: ವಿ.ಸುನೀಲ್ ಕುಮಾರ್ (ಉಸ್ತುವಾರಿ), ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ (ಸಹ ಉಸ್ತುವಾರಿ)

ಬೆಂಗಳೂರು ಪದವೀಧರ ಕ್ಷೇತ್ರ: ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ್‌ ನಾರಾಯಣ

ಆಗ್ನೇಯ ಶಿಕ್ಷಕರ ಕ್ಷೇತ್ರ: ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್​

ದಕ್ಷಿಣ ಶಿಕ್ಷಕರ ಕ್ಷೇತ್ರ: ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ

ವಿಧಾನಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಬಿಜೆಪಿ ಇತ್ತೀಚೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದೀಗ 6 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ ಮಾಡಿದೆ. ಇನ್ನು ಜೆಡಿಎಸ್ ಜೊತೆಗಿನ ಲೋಕಸಭಾ ಚುನಾವಣಾ ಮೈತ್ರಿ ವಿಧಾನಪರಿಷತ್​​ಗೂ ವಿಸ್ತರಣೆಯಾಗಿದೆ. ಮತ್ತೊಂದೆಡೆ ಕಾಂಗ್ರೆಸ್​ ಕೂಡ
ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಿದೆ.

ಜೆಡಿಎಸ್​ ಬೇಡಿಕೆಯಂತೆಯೇ 2 ಸ್ಥಾನ ಬಿಟ್ಟು ಕೊಡಲು ಬಿಜೆಪಿ ಕೊನೆಗೂ ಸಮ್ಮತಿ ನೀಡಿದೆ.
ಮಾಜಿ ಸಿಎಂ-ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬೇಡಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮತಿ ನೀಡಿದ್ದಾರೆ. ಈ ಒಡಂಬಡಿಕೆಯ ಪ್ರಕಾರ 6 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ರೆ, ಉಳಿದೆರಡು ಕ್ಷೇತ್ರದಲ್ಲಿ ಜೆಡಿಎಸ್​ ಸ್ಪರ್ಧೆ ಮಾಡಲಿದೆ.

ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅ.‌ದೇವೇಗೌಡಗೆ ಮತ್ತೊಮ್ಮೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇಲ್ಲಿ ಎ.ಹೆಚ್.ಆನಂದ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ವೈ.ಎ. ನಾರಾಯಣಸ್ವಾಮಿಗೆ ಮತ್ತೆ ಬಿಜೆಪಿ ಟಿಕೆಟ್ ನೀಡಲಾಗಿದೆ.‌ ಇನ್ನು ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್​​ರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.

ಆದರೆ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಮತ್ತು ಗುರುನಾಥ್ ಜಾಂತಿಕರ್ ಅವರುಗಳು ಈಶಾನ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದೀಗ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಹೊಸಮುಖ ಇ.ಸಿ. ಲಿಂಗರಾಜುಗೆ ಬಿಜೆಪಿ ಟಿಕೆಟ್​ ನೀಡಲಾಗಿದೆ. ದಕ್ಷಿಣ ಪದವೀಧರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲಾಗಿದೆ. ಇನ್ನು ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಡಾ. ಧನಂಜಯ ಸರ್ಜಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.


Share It

You cannot copy content of this page