ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್‌ಗೆ ಶಿಕ್ಷೆ ಆಗುವ ಕುರಿತು ಯಾವ ತಕರಾರು ಇಲ್ಲ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಹೊರಗೆ ಹೋಗಿದ್ದಾನೆ. ರೇವಣ್ಣ ಅವರ ಬಂಧನ, ಜಾಮೀನು ಪ್ರಕ್ರಿಯೆ ನ್ಯಾಯಾಲಯದ ಹಂತದಲ್ಲಿದೆ. ಅವರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಆಗುವುದರಲ್ಲಿ ನನ್ನದೇನು ತಕರಾರಿಲ್ಲ. ಆದರೆ, ಪ್ರಕರಣದಲ್ಲಿ ಮತ್ತಷ್ಟು ಜನ ಇದ್ದಾರೆ. ಅವರ ಮೇಲೂ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪೆನ್ ಡ್ರೈವ್ ಪ್ರಕರಣದ ಹಿಂದೆ ಅನೇಕ ಜನರು ಇದ್ದಾರೆ. ಅವರ ಹೆಸರೆನ್ನೆಲ್ಲ ನಾನೀಗ ಹೇಳಲು ಹೋಗುವುದಿಲ್ಲ. ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ಹೆಣ್ಣು ಮಕ್ಕಳು ಅಪಾಯಕ್ಕೆ ಸಿಲುಕಿದ್ದಾರೆ. ಅವರಿಗೆಲ್ಲ ಪರಿಹಾರ ಸಿಗಬೇಕು ಎಂದು ತಿಳಿಸಿದರು.
ಪ್ರಜ್ವಲ್ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲು ನನ್ನದೇನೂ ತಕರಾರು ಇಲ್ಲ. ಆದರೆ, ರೇವಣ್ಣ ಅವರ ಬಂಧನದ ಹಿಂದೆ ಯಾವ ರೀತಿಯ ಘಟನೆಗಳು ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಒಂದು ಕೇಸಲ್ಲಿ ಬೇಲ್ ಸಿಕ್ಕಿದೆ, ಮತ್ತೊಂದು ಬೇಲ್ ವಿಚಾರಣೆ ಸೋಮವಾರ ನಡೆಯಲಿದೆ. ಇದೆಲ್ಲ ಹೇಗೆ ನಡೆಯುತ್ತಿದೆ ಎಂಬುದು ಇಡೀ ನಾಡಿಗೆ ಗೊತ್ತಾಗುತ್ತಿದೆ ಎಂದರು.
ಯಾವುದೇ ವಿಷಯದ ಬಗ್ಗೆ ಪಕ್ಷದ ಅಧ್ಯಕ್ಷರಾಗಿ ಕುಮಾರಸ್ವಾಮಿ ಮಾತನ್ನಾಡುತ್ತಾರೆ. ನಾನು ಎಷ್ಟು ಹೇಳಬೇಕೋ ಅಷ್ಟು ಹೇಳಿದ್ದೇನೆ. ಜೂನ್ 4 ರ ಫಲಿತಾಂಶದ ನಂತರ ನಾನು ಪಕ್ಷದ ಕಚೇರಿಯಲ್ಲಿ ಮಾಧ್ಯಮದವರ ಜತೆ ಮಾತನ್ನಾಡುತ್ತೇನೆ. ಅಲ್ಲಿವರೆಗೆ ನಾನು ಯಾರಿಗೂ ಸಿಗುವುದಿಲ್ಲ. ಜನ್ಮದಿನದ ಅಂಗವಾಗಿ ಇಂದು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೇನೆ ಅಷ್ಟೇ ಎಂದರು.