ರಾಮನಗರ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಬಿಜೆಪಿಯ ದೇವರಾಜೇಗೌಡ ಅವರ ಹೇಳಿಕೆ ರಾಜಕೀಯಪ್ರೇರಿತ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ದೇವರಾಜೇಗೌಡ ಅವರು ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಂಚೆ ಜೆಡಿಎಸ್ ಪಕ್ಷದ ನಾಯಕರ ವಿರುದ್ಧ ತೊಡೆ ತಟ್ಟಿದ್ದರು. ಮೈತ್ರಿ ಬಳಿಕ ಯೂಟರ್ನ್ ಹೊಡೆದಿದ್ದು, ಇದೀಗ ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾದ ಅವರ ನಡೆಯ ಹಿಂದೆ ರಾಜಕೀಯ ಪ್ರೇರಣೆ ಇದೆ ಎಂದು ತಿಳಿಸಿದರು.
ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ದೇವರಾಜೇಗೌಡ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಸಕ್ರಿಯ ರಾಜಕಾರಣದಲ್ಲಿರುವ ಅವರು ಪಕ್ಷದ ಆದೇಶದಂತೆ ಆರೋಪ ಮಾಡಿರಬಹುದು ಎಂದು ವ್ಯಂಗ್ಯವಾಡಿದರು.
ಒಂದು ವರ್ಷದಿಂದ ಪ್ರಜ್ವಲ್ ಪೆನ್ ಡ್ರೈವ್ ಅನ್ನು ದೇವರಾಜೇಗೌಡ ಇಟ್ಟುಕೊಂಡು ಏನು ಮಾಡುತ್ತಿದ್ದರು? ಇದರಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದು ಅವರಿಗೆ ಅರಿವಿರಲಿಲ್ಲವಾ? ಹೊಳೆನರಸೀಪುರ ಮತ್ತು ಹಾಸನಕ್ಕೆ ಸೀಮಿತವಾದ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಹಾಗೂ ದೇವರಾಜೇಗೌಡ ನಡುವಿನ ವೈಯಕ್ತಿಕ ವಿಷಯವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿದ್ದು ಇದೇ ದೇವರಾಜೇಗೌಡ. ಹೀಗಾಗಿ, ಅವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ ಎಂದರು.
ದೇವರಾಜೇಗೌಡ ಜೈಲಿನಿಂದ ಹೊರಬಂದ ಮೇಲೆ ಸರಕಾರ ಪತನವಾಗಲಿದೆ ಎಂಬ ವಿರೋಧಪಕ್ಷದವರ ಹೇಳಿಕೆ ಕುರಿತ ಪ್ರಶ್ನೆಗೆ ಮೊದಲು ಅವರು ಜೈಲಿನಿಂದ ಬಿಡುಗಡೆಯಾಗಲೀ, ಆಮೇಲೆ ಸರಕಾರ ಬೀಳುತ್ತೋ, ನಿಲ್ಲುತ್ತೋ ನೋಡೋಣ ಎಂದು ವ್ಯಂಗ್ಯವಾಡಿದರು.