ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್ಐಟಿ ತನಿಖಾ ತಂಡಕ್ಕೆ ವಿಚಾರಣೆಗೆ ಸಿಗದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಿಲ್ಲ.
ಮೊದಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿದೇಶದಿಂದ ವಾಪಸ್ ಆಗುತ್ತಾರೆ ಎಂಬ ಸುದ್ದಿ ಬೆಳಗ್ಗೆ ಹರಿದಾಡಿತ್ತು. ಆದರೆ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ಅವರು ದುಬೈನಿಂದ ನೇರವಾಗಿ ಬೆಂಗಳೂರಿನ ಕೆಐಎಎಲ್ ಗೆ ಬಂದಿಳಿಯಲಿದ್ದಾರೆ ಎಂಬ ಮಾಹಿತಿ ಹೊರಬಂದಿತ್ತು.
ಆದರೆ 4 ಗಂಟೆಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬರದ ಕಾರಣ ಎಸ್ಐಟಿ ತನಿಖಾ ತಂಡಕ್ಕೆ ಗೊಂದಲ ಮೂಡಿಸಿದೆ. ಆದರೆ ಎಸ್ಐಟಿ ಮೂಲಗಳ ಪ್ರಕಾರ ಪ್ರಜ್ವಲ್ ಅವರು ಇಂದು ರಾತ್ರಿಯೊಳಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಖುದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿ, ‘ಈಗಾಗಲೇ ಎಸ್ಐಟಿ ತನಿಖಾ ತಂಡ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಿದೆ. ಬ್ಲೂ ಕಾರ್ನರ್ ನೋಟಿಸ್ ನೀಡಿ ಮೊದಲು ಪ್ರಕರಣಕ್ಕೆ ಬೇಕಾಗಿರುವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಆತನು ಇರುವ ಸ್ಥಳವನ್ನು ಕಂಡುಹಿಡಿಯಲಾಗುತ್ತದೆ.
ಆನಂತರ ಆರೋಪಿ ವಿದೇಶದಿಂದ ವಾಪಸ್ ಬಂದಾಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಬಹುಶಃ ಇಂದು ರಾತ್ರಿಯೊಳಗೆ ಬೆಂಗಳೂರಿನ ಏರ್ಪೋರ್ಟ್ ಗೆ ಪ್ರಜ್ವಲ್ ರೇವಣ್ಣ ದುಬೈನಿಂದ ವಾಪಸ್ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.