ಇಂದು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಪಿ.ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಗುಜರಾತ್ನ ಗಾಂಧಿನಗರದ ಲೋಕಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಭಾರತದ ಸಂವಿಧಾನ ಶಿಲ್ಪಿ ಮತ್ತು ಮಹಾನ್ ಸಮಾಜ ಸುಧಾರಕ ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯಂದು, ನಾನು ಅವರಿಗೆ ಗೌರವಯುತ ನಮನ ಸಲ್ಲಿಸುತ್ತೇನೆ. ಅಂಬೇಡ್ಕರ್ ಅವರು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಚಿಂತಕ, ಕಾನೂನು ವಿದ್ವಾಂಸ ಮತ್ತು ಸಮಾನತೆಯ ಸಾಮಾಜಿಕ ವ್ಯವಸ್ಥೆಯ ಪ್ರಬಲ ಪ್ರತಿಪಾದಕರಾಗಿದ್ದರು. ಅವರು ಸಮಾಜದ ವಂಚಿತ ಮತ್ತು ದುರ್ಬಲ ವರ್ಗಗಳ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಸ್ಮರಿಸಿದ್ದಾರೆ.
ಅಂಬೇಡ್ಕರ್ ಅವರು ಅಸಮಾನತೆಗಳನ್ನು ತೊಡೆದುಹಾಕುವ ಮಾರ್ಗವನ್ನು ತೋರಿಸಿದ್ದಲ್ಲದೆ, ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹಿಳಾ ಶಿಕ್ಷಣ ಮತ್ತು ಅವರ ಹಕ್ಕುಗಳಿಗೆ ಆದ್ಯತೆ ನೀಡಿದರು. ಅವರ ಬಹುಮುಖಿ ಕೊಡುಗೆಗಳು ಭವಿಷ್ಯದ ಪೀಳಿಗೆಗಳು ದೇಶದ ಸೇವೆ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಲು ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉಪರಾಷ್ಟ್ರಪತಿ ಭವನದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಾಬಾಸಾಹೇಬ್ ಅವರ ಜೀವನ ಮತ್ತು ಕೆಲಸವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆದರ್ಶಗಳಿಗೆ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಅವರ ದೃಷ್ಟಿಕೋನ ಮತ್ತು ನಿರಂತರ ಕೊಡುಗೆಗಳು ನಮ್ಮ ರಾಷ್ಟ್ರವನ್ನು ಹೆಚ್ಚು ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಸಮಾನ ಸಮಾಜದತ್ತ ಸಾಗಿಸಲು ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರ ಆದರ್ಶಗಳನ್ನು ಎತ್ತಿಹಿಡಿಯುವ ನಮ್ಮ ಸಂಕಲ್ಪವನ್ನು ನಾವು ಪುನರುಚ್ಚರಿಸೋಣ ಮತ್ತು ನಮ್ಮ ರಾಷ್ಟ್ರಕ್ಕಾಗಿ ಅವರು ಪಾಲಿಸಿದ ಆದರ್ಶಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದು ಹೇಳಿದ್ದಾರೆ.

