ರಾಯಚೂರು: ಜಿಲ್ಲೆಯಲ್ಲಿ ತಾಪಮಾನ ಮಿತಿ ಮೀರಿದ ಹಿನ್ನೆಲೆಯಲ್ಲಿ ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದಲ್ಲಿ ಓರ್ವ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇಡೀ ಗ್ರಾಮಸ್ಥರು ಕಂಗಾಲಾಗುವಂತೆ ಮಾಡಿದೆ.
ಮೃತಪಟ್ಟವರನ್ನು ಹುಡಾ ಗ್ರಾಮದ ಪ್ರದೀಪ(15), ಗಂಗಮ್ಮ ದೇವದಾಸಿ(60), ದುರ್ಗಮ್ಮ60), ಹುಪ್ಪಾರ (50) ಮೃತಪಟ್ಟವರೆಂದು ಗುರುತಿಸಲಾಗಿದೆ. ಹುಡಾ ಗ್ರಾಮದ ವೀರೇಶ ಎಂಬ ವ್ಯಕ್ತಿ ನಿನ್ನೆ ಮಧ್ಯಾಹ್ನ ಗ್ರಾಮದ ಹತ್ತಿರದ ಹಳ್ಳದ ಬಳಿ ಬಟ್ಟೆ ತೊಳೆಯಲು ಹೋದ ವೇಳೆ ಬಿಸಿಲಿನ ತಾಪಮಾನ ತಾಳಲಾರದೆ ಹಳ್ಳದ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಉಳಿದ 3 ಜನರು ಮನೆಯಲ್ಲಿದ್ದರೂ ಸಹ ಬಿಸಿಲಿನ ಝಳ ತಾಳಲಾರದೆ ಮನೆಯಲ್ಲೇ ಸಾವನ್ನಪ್ಪಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಹುಡಾ ಗ್ರಾಮ ವ್ಯಾಪ್ತಿಯಲ್ಲಿ ನಿನ್ನೆ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಈ ತಾಪಮಾನ ತಾಳಲಾರದೆ ಗ್ರಾಮದ ನಾಲ್ವರು ಮೃತಪಟ್ಟಿದ್ದು, ಹುಡಾ ಗ್ರಾಮಸ್ಥರನ್ನು ಕಂಗಾಲಾಗುವಂತೆ ಮಾಡಿದೆ. ಒಟ್ಟಾರೆ ಹುಡಾ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ನಾಲ್ವರು ಗ್ರಾಮಸ್ಥರು ಬಿಸಿಲಿಗೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಆತಂಕಗೊಂಡು ಹುಡಾ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
ಗ್ರಾಮೀಣ ಪೊಲೀಸರು, ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿದ್ದಾರೆ. ಸಿಂಧನೂರು ತಾಲ್ಲೂಕು ಸಾರ್ವಜನಿಕ ಅಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಸಾಗಿಸಲಾಗಿದೆ.