ಕೊನೆಗೂ ಬೆಂಗಳೂರಿಗೆ ಬಂತು ತುಂತುರು ಮಳೆ!
ಬೆಂಗಳೂರು, (ಏಪ್ರಿಲ್ 19): ಬಿರು ಬಿಸಿಲಿನಿಂದ ಪರಿತಪಿಸುತ್ತಿದ್ದ ಇಡೀ ಕರುನಾಡಿಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದರೂ ಬೆಂಗಳೂರು ನಗರದ ಸುತ್ತ ಹನಿ ಮಳೆ ಬಿದ್ದಿರಲಿಲ್ಲ. ಆದರೆ ಬೆಂಗಳೂರು ನಗರದ ಹಲವೆಡೆ ತುಂತುರು ಮಳೆ ಸುರಿದಿದೆ. ಇದರಿಂದ ಬಿಸಿಲಿಗೆ ಬೆಂದಿದ್ದ ಬೆಂಗಳೂರಿಗರು ಇಂದು ಸಂತಸಗೊಂಡಿದ್ದಾರೆ.
ಕಳೆದ 4-5 ತಿಂಗಳ ಬಳಿಕ ಕೊನೆಗೂ ಇಂದು ಶುಕ್ರವಾರ ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆಯಾಗಿದೆ. ಇಂದು (ಏಪ್ರಿಲ್ 19) ನಗರದ ಯಲಹಂಕ, ಕೆಂಗೇರಿ ಸೇರಿದಂತೆ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ಮಳೆ ಕೊಂಚ ತಂಪೆರೆದಿದೆ. ಇನ್ನು ಉಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ.
ರಾಜ್ಯದ ಹಲವೆಡೆ ಮಳೆ ಸಾಧ್ಯತೆ…
ಇನ್ನು ಇಂದು ಕೂಡ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಮೇನಲ್ಲಿ ಬೆಂಗಳೂರಿನಲ್ಲಿ ಮಳೆ
ಬೆಂಗಳೂರು ನಗರದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಎಲ್ಲೂ ಬಟ್ಟೆ ತೊಯ್ಯುವಷ್ಟು ಮಳೆಯಾಗಿಲ್ಲ. ಇನ್ನು ಜೋರಾಗಿ ಮಳೆ ಬರಬೇಕಂದರೆ ಮೇ ತಿಂಗಳವರೆಗೂ ಕಾಯಬೇಕೆಂದು ಹವಾಮಾನ ವರದಿ ತಿಳಿಸಿದೆ. ಏಪ್ರಿಲ್ ನಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್‌ನಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವುದಿಲ್ಲ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಶುಷ್ಕ ಸ್ಪೆಲ್‌ಗಳು ಸುಮಾರು 100- 120 ದಿನಗಳವರೆಗೆ ಇರುತ್ತದೆ. ಆದರೆ ಇದು ಸಾಮಾನ್ಯಕ್ಕಿಂತ ಹೆಚ್ಚು ದೀರ್ಘವಾಗಿದೆ. ಆರಂಭದಲ್ಲಿ ಭಾರತೀಯ ಹವಾಮಾನ ಇಲಾಖೆಯು ವಾರದೊಳಗೆ ಬೆಂಗಳೂರಿಗೆ ಮಳೆಯಾಗುವ ಮುನ್ಸೂಚನೆ ನೀಡಿತು. ಆದರೆ ಇತ್ತೀಚಿನ ವರದಿ ವರದಿ ಪ್ರಕಾರ ತೀವ್ರವಾದ ಶಾಖದ ಕಾರಣದಿಂದ ಶೀಘ್ರದಲ್ಲಿ ಮಳೆಯಾಗುವ ಸಾಧ್ಯತೆಗಳು ಕಡಿಮೆ ಇದೆ ಎನ್ನಲಾಗಿದೆ. ಮಳೆ ಇವತ್ತು ಬರುತ್ತೆ, ನಾಳೆ ಬರುತ್ತೆ, ಮುಂದಿನ ವಾರ ಬರುತ್ತೆ ಎಂದು ಜನರು ಈಗಾಗಲೇ 3 ತಿಂಗಳು ಕಳೆದಿದ್ದಾರೆ. ಇನ್ನೇನು ಏಪ್ರಿಲ್ ತಿಂಗಳು ಮುಗಿದು 11 ದಿನಗಳು ಮಾತ್ರ ಬಾಕಿ ಇವೆ. ಆ ಬಳಿಕ ಬೆಂಗಳೂರಿಗರು ಮೇ ತಿಂಗಳಲ್ಲಿ ಮಳೆ ನಿರೀಕ್ಷೆ ಮಾಡಬಹುದಾಗಿದೆ.