ಸತತ ಗೆಲುವು ಕಾಣುತ್ತಿರುವ ಆರ್‌ಸಿಬಿಗೆ ವರುಣನೇ ಎದುರಾಳಿ
ಆರ್.ಸಿ.ಬಿ-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ!
ಬೆಂಗಳೂರು: ಈ ಬಾರಿಯ ಐಪಿಎಲ್-2024 ರ ಪ್ಲೇ-ಆಫ್ ಪ್ರವೇಶಿಸಲು ಬೆಂಗಳೂರಿನ ಆರ್.ಸಿ.ಬಿ ತಂಡ ಭಾನುವಾರ ಮೇ 12 ರ ಪಂದ್ಯ ಸೇರಿದಂತೆ ಬಾಕಿ ಉಳಿದ ಎರಡೂ ಲೀಗ್ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ.
ಭಾನುವಾರ ಸಂಜೆ ಮುಗಿದು ರಾತ್ರಿಯಾಗುತ್ತಿದ್ದಂತೆ 7:30 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥೇಯ ಆರ್.ಸಿ.ಬಿ. ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ಮಹತ್ವದ ಪಂದ್ಯವಾಡಲಿದೆ. ಆದರೆ ಈ ಮಹತ್ವದ ಪಂದ್ಯಕ್ಕೆ ಆಕ್ಯುವೆದರ್ ಪ್ರಕಾರ ಭಾನುವಾರ ಮಧ್ಯಾಹ್ನ ಮೋಡ ಕವಿದ ವಾತಾವರಣವು ಇರಲಿದ್ದು ಗುಡುಗು ಸಹಿತ ಮಳೆ ಸುರಿಸಲಿದೆ. ಈ ರೀತಿ ಮಳೆ ಬೀಳುವ ಸಾಧ್ಯತೆ ಶೇ.55 ರಷ್ಟು ಎಂದು ಆಕ್ಯುವೆದರ್ ತಿಳಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಗೆಲ್ಲುವ ಅವಕಾಶ ಹೆಚ್ಚು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ ಒಟ್ಟು 93 ಐಪಿಎಲ್ ಪಂದ್ಯಗಳು ನಡೆದಿದ್ದು, 2ನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಡೆಸುವ ತಂಡವೇ 50 ಬಾರಿ ಗೆಲುವು ಸಾಧಿಸಿದೆ.
ಬ್ಯಾಟಿಂಗ್ ಪಿಚ್ ಎಂದು ಪರಿಗಣಿಸುವ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸುವ ತಂಡದ ಸರಾಸರಿ ಸ್ಕೋರ್ 166 ರನ್ ಆಗಿದೆ. ಆದ್ದರಿಂದ ಸಲೀಸಾಗಿ 2ನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಡೆಸುವ ತಂಡ ಗೆಲ್ಲುವ ಅವಕಾಶ ಇದೆ. ಆದ್ದರಿಂದ ನಾಳಿನ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಏತನ್ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲು ರೋಚಕ ಪಂದ್ಯ ನೋಡಿ ಮಸ್ತ್ ಎಂಜಾಯ್ ಮಾಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಇಂತಹ ಅತಿ ಮಹತ್ವದ ಪಂದ್ಯಕ್ಕೆ ಮಳೆರಾಯನೇ ಅಡ್ಡಿಪಡಿಸುವ ಸಾಧ್ಯತೆ ಶೇ.55 ರಷ್ಟು ಎಂದು ತಿಳಿಸಿರುವುದು ಆರ್.ಸಿ.ಬಿ ಅಭಿಮಾನಿಗಳಿಗೆ ಭಯ ಸೃಷ್ಟಿಸಿದೆ.