ಚಂದೌಲಿ (ಉತ್ತರ ಪ್ರದೇಶ): ಅಣ್ಣ ತಂಗಿ ಇಬ್ಬರು ಒಂದೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವ ಘಟನೆ ಮುಘಲ್ಸರಾಯ್ ಕೊಟ್ವಾಲಿ ಪ್ರದೇಶದ ಜೈಸ್ವಾಲ್ ಎಂಬ ಶಾಲೆ ಬಳಿಯ ಕಟ್ಟಡವೊಂದರಲ್ಲಿ ನಡೆದಿದೆ.
ಗುಡಿಯಾ ಗುಪ್ತಾ (೪೦) ಮತ್ತು ರಾಜು ಗುಪ್ತಾ (೪೫) ಆತ್ಮಹತ್ಯೆ ಮಾಡಿಕೊಂಡವರು. ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರು ಸಹೋದರ ಮತ್ತು ಸಹೋದರಿ ಎಂದು ತಿಳಿದು ಬಂದಿದೆ. ಇಬ್ಬರ ಶವಗಳು ಮನೆಯ ಒಂದೇ ಕೊಠಡಿಯಲ್ಲಿ ಪತ್ತೆಯಾಗಿವೆ.
ಮೇಲ್ನೋಟಕ್ಕೆ ಮೃತರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಜೈಸ್ವಾಲ್ ಶಾಲೆಯ ಹಿಂಭಾಗದ ಖಾಸಗಿ ಮನೆಯಲ್ಲಿ ವಾಸಿಸುತ್ತಿದ್ದ ಈ ಇಬ್ಬರು, ಸಹೋದರ ಸಹೋದರಿಯರ ಪೋಷಕರು ಸುಮಾರು ೮ ವರ್ಷಗಳ ಹಿಂದೆ ನಿಧನರಾಗಿದ್ದರು. ಇವರಿಬ್ಬರು ಮದುವೆ ಆಗಿರಲಿಲ್ಲ.
ಇಬ್ಬರ ಮೃತದೇಹಗಳು ಮನೆಯ ಮೇಲಿನ ಮಹಡಿಯ ಕೊಠಡಿಯಲ್ಲಿ ಪತ್ತೆಯಾಗಿವೆ. ಪಕ್ಕದ ವ್ಯಕ್ತಿಯೊಬ್ಬರು ರಾಜು ಅವರನ್ನು ಹುಡುಕಿಕೊಂಡು ಬಂದಾಗ ವಿಷಯ ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.