ಬೆಂಗಳೂರು: ಶಿಕ್ಷಕರ ನೇಮಕ ಮಾಡಲು ಬಿಬಿಎಂಪಿ ಸೆಕ್ಯುರಿಟಿ ಏಜನ್ಸಿಯ ಮೊರೆ ಹೋಗಿದೆ. ಇಂತಹ ದಟ್ಟ ದರಿದ್ರ ಮನಸ್ಥಿತಿ ಬಿಬಿಎಂಪಿ ಅಧಿಕಾರಿಗಳಿಗೆ ಯಾಕೆ ಎಂಬು ಎಂಬುದು ರಾಜಧಾನಿಯ ನಾಗರೀಕರ ಪ್ರಶ್ನೆ.
ಬಿಬಿಎಂಪಿ ವ್ಯಾಪ್ತಿಯ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂಬುದು ಸರಕಾರದ ಆಶಯ. ಅದಕ್ಕಾಗಿ, ಸರಕಾರ ಬಿಬಿಎಂಪಿ ವ್ಯಾಪ್ತಿಯ ಶಿಕ್ಷಣಕ್ಕೆ ತನ್ನದೇ ಆದ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಬಿಬಿಎಂಪಿಗೆ ಸ್ವತಂತ್ರವಾಗಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಬಿಬಿಎಂಪಿ ಈ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಸೆಕ್ಯುರಿಟಿ ಗಾರ್ಡ್ಗಳ ನೇಮಕ ಸಂಸ್ಥೆಗೆ ನೀಡಿದೆ.
ಬಿಬಿಎಂಪಿಯ ಈ ಕ್ರಮ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಬೇಜವ್ದಾರಿತನವನ್ನು ಕಟುವಾಗಿ ಟೀಕಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಗ್ಗೆ ಗಮನಕ್ಕೆ ತಂದು, ಅವರು ನೇಮಕ ಆದೇಶ ಕೈಬಿಡುವುದಾಗಿ ಹೇಳಿದ್ದರೂ, ಬಿಬಿಎಂಪಿ ಮತ್ತದೇ ಏಜೆನ್ಸಿ ಮೂಲಕ ನೇಮಕಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಬಿಬಿಎಂಪಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ 700 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಬಿಬಿಎಂಪಿ ತೀರ್ಮಾನಿಸಿದೆ. ಅದಕ್ಕಾಗಿ, ಸೆಕ್ಯುರಿಟಿ ಏಜೆನ್ಸಿಗೆ ನೇಮಕ ಪ್ರಕ್ರಿಯೆಯ ಹೊಣೆಗಾರಿಕೆ ವಹಿಸಿದೆ. ಮೂರು ಶೈಕ್ಷಣಿಕ ವಲಯಕ್ಕೊಂದು ಸೆಕ್ಯುರಿಟಿ ಏಜೆನ್ಸಿಗೆ ಪ್ರಕ್ರಿಯೆಯನ್ನು ಗುತ್ತಿಗೆ ನೀಡಿದೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.