ಉಪಯುಕ್ತ ರಾಜಕೀಯ ಸುದ್ದಿ

ಕೆಪಿಟಿಸಿಎಲ್‌ನಲ್ಲಿ 902 ಹುದ್ದೆಗಳ ನೇಮಕಕ್ಕೆ ಆದೇಶ

Share It

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ ಆದೇಶ ಹೊರಡಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಇಂಜಿನಿಯರ್‌(ವಿದ್ಯುತ್‌), 17 ಸಹಾಯಕ ಇಂಜಿನಿಯರ್(ಸಿವಿಲ್), 15-ಕಿರಿಯ ಇಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ.

ಅದೇ ರೀತಿ, 535 ಅಭ್ಯರ್ಥಿಗಳ ಪೈಕಿ 502 (ಕಿರಿಯ ಇಂಜಿನಿಯರ್) ಅಭ್ಯರ್ಥಿಗಳಿಗೆ ಬುಧವಾರ ಮತ್ತು ಗುರುವಾರ ಕೌನ್ಸಿಲಿಂಗ್‌ ನಡೆಸಿ ನೇಮಕ ಆದೇಶ ನೀಡಲಾಗಿದೆ. ಈ ಪೈಕಿ 73 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿದವರಾಗಿದ್ದು, ಉಳಿದ 429 ಅಭ್ಯರ್ಥಿಗಳು ಇತರೆ ವೃಂದದವರು.

ಇನ್ನುಳಿದಂತೆ, 360 ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ (ಮೇ 24, 2024) ಕಡೆಯ ದಿನವಾಗಿದೆ. ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಂಡ ನಂತರ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಮೀಸಲು ಕೋರಿರುವ ದಾಖಲೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದು ತ್ವರಿತವಾಗಿ ಸ್ಥಳ ನಿಯುಕ್ತಿ ಹಾಗೂ ನೇಮಕ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ.

ಕೋಟ್‌:
“ರಾಜ್ಯಾದ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಿದ್ಯುತ್‌ ಪ್ರಸರಣ ಸೇವೆ ಒದಗಿಸುವುದು ನಮ್ಮ ಬದ್ಧತೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸಿ, ಅಭ್ಯರ್ಥಿಗಳಿಗೆ ಕೆಲಸದ ಆದೇಶ ನೀಡಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು”.

  • ಕೆ.ಜೆ ಜಾರ್ಜ್‌, ಇಂಧನ ಸಚಿವ

“902 ಹೊಸ ಉದ್ಯೋಗಿಗಳ ನೇಮಕದ ಮೂಲಕ ಕೆಪಿಟಿಸಿಎಲ್‌ ಇನ್ನಷ್ಟು ಬಲಗೊಂಡು, ಗುಣಮಟ್ಟದ ಸೇವೆಯನ್ನು ಮುಂದುವರಿಸಲಿದೆ. ಆಯ್ಕೆ ಪ್ರಕ್ರಿಯೆಯನ್ನುಅತ್ಯಂತ ಪಾರದರ್ಶಕ ಮತ್ತು ಸಮರ್ಥವಾಗಿ ನಡೆಸಲಾಗಿದೆ.

  • ಪಂಕಜ್ ಕುಮಾರ್ ಪಾಂಡೆ, ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್

Share It

You cannot copy content of this page