ರಾಜಕೀಯ ಸುದ್ದಿ

ಬರಪರಿಹಾರ ಅತ್ಯಲ್ಪ: ಸುಪ್ರೀಂಕೋರ್ಟ್ ಮುಂದೆ ಕರ್ನಾಟಕ ಸರ್ಕಾರದ ವಾದ

Share It

ನವದೆಹಲಿ: ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ ಬರ ಪರಿಹಾರ ಪ್ರಮಾಣದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ವಾಕ್ಸಮರವು ಸುಪ್ರೀಂ ಕೋರ್ಟ್‌ ಅಂಗಳದಲ್ಲೂ ಪ್ರತಿಧ್ವನಿಸಿದೆ.

ತಜ್ಞರ ತಂಡ ಸಲ್ಲಿಸಿದ ಶಿಫಾರಸಿನಂತೆ ಕರ್ನಾಟಕಕ್ಕೆ ಬರ ಪರಿಹಾರ ರೂಪದಲ್ಲಿ 3,400 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರಕಾರದ ಪರ ವಕೀಲರು ಮತ್ತು ಅಟಾರ್ನಿ ಜನರಲ್‌ ಆರ್‌ವಿ ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಿದ್ದಾರೆ.

ಆದರೆ, ರಾಜ್ಯ ಸರಕಾರದ ಪರ ವಕೀಲರಾದ ಕಪಿಲ್‌ ಸಿಬಲ್‌ ಅವರು ಪರಿಹಾರ ಮೊತ್ತದ ಬಗ್ಗೆ ಆಕ್ಷೇಪ ಎತ್ತಿದ್ದು, ನೀಡಿರುವ ಮೊತ್ತವು ಬೇಡಿಕೆ ಇಟ್ಟ ಮೊತ್ತಕ್ಕೆ ಹೋಲಿಸಿದರೆ ಅತ್ಯಲ್ಪ ಎಂದು ವಾದಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ, ಪರಿಹಾರ ಕುರಿತ ತಜ್ಞರ ಶಿಫಾರಸು ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ರಾಜ್ಯದಲ್ಲಿ ಬರ ಪರಿಹಾರಕ್ಕೆ ‘ಎನ್‌ಡಿಆರ್‌ಎಫ್‌’ನಿಂದ ಹಣ ಬಿಡುಗಡೆ ಮಾಡಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕ ಸರಕಾರ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿಗಳಾದ ಬಿಆರ್‌ ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರದ ಪರ ವಕೀಲರ ನಡುವೆ ಮಾತಿನ ಜಟಾಪಟಿ ನಡೆಯಿತು.

ಆರಂಭದಲ್ಲಿ ಅಟಾರ್ನಿ ಜನರಲ್‌ ವೆಂಕಟರಮಣಿ ಅವರು, ”ತಜ್ಞರ ಸಮಿತಿಯ ಶಿಫಾರಸಿನಂತೆ ಈಗಾಗಲೇ ಕೊಂಚ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ,” ಎಂದು ಹೇಳಿದರು.

ಕೇಳಿದ್ದು 18,000 ಕೋಟಿ ರೂ: ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್‌ ಸಿಬಲ್‌, ”ಕೇಂದ್ರ ಸರಕಾರ 3,450 ಕೋಟಿ ರೂ. ಮಾತ್ರ ಬಿಡುಗೆ ಮಾಡಿದೆ. ರಾಜ್ಯ ಸರಕಾರ ಕೇಳಿದ್ದು 18,000 ಕೋಟಿ ರೂ.,” ಎಂದು ವಾದಿಸಿದರು.

”ಕೇಂದ್ರ ಸರಕಾರದ ನೀತಿಯಂತೆಯೇ ಬರ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಬರದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಕುಟುಂಬಗಳ ಜೀವನೋಪಾಯಕ್ಕಾಗಿ 12,577 ಕೋಟಿ ರೂ. ನೀಡಲು ಕೋರಲಾಗಿದೆ. ಆದರೆ, ಕೇಂದ್ರ ಸರಕಾರ ಈ ನಿರ್ದಿಷ್ಟ ಮನವಿಯನ್ನು ಪರಿಗಣಿಸಿಲ್ಲ,” ಎಂದರು.

ನ್ಯಾಯಾಲಯವೇ ತೀರ್ಮಾನಿಸಲಿ: ಸಿಬಲ್‌

”ರಾಜ್ಯಕ್ಕೆ ಬರ ಪರಿಶೀಲನೆಗೆ ಬಂದಿದ್ದ ಅಂತರ-ಸಚಿವಾಲಯ ಅಧಿಕಾರಿಗಳ ತಂಡವು ತನ್ನ ಶಿಫಾರಸು ವರದಿಯನ್ನು ಉಪ ಸಮಿತಿಗೆ ಸಲ್ಲಿಸಿದ್ದು, ಈ ಉಪ ಸಮಿತಿಯು ಮುಂದಿನ ಕ್ರಮ ಕೈಗೊಳ್ಳಲು ಸೂಕ್ತ ಪ್ರಾಧಿಕಾರಿಗಳಿಗೆ ಸೂಚಿಸುತ್ತದೆ. ಈ ವರದಿಯು ನಮ್ಮ ಬಳಿ ಇಲ್ಲ. ಶಿಫಾರಸು ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಸುವಂತೆ ನ್ಯಾಯಪೀಠವು ಸರಕಾರಕ್ಕೆ ನಿರ್ದೇಶನ ನೀಡಬೇಕು. ವರದಿಯ ಅನುಸಾರ ನ್ಯಾಯಾಲಯ ಯಾವ ತೀರ್ಮಾನ ಕೈಗೊಂಡರೂ ನಮಗೆ ಅಭ್ಯಂತರವಿಲ್ಲ,” ಎಂದು ಕಪಿಲ್‌ ಸಿಬಲ್‌ ವಾದಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ ವರದಿಯನ್ನು ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿತು. ವರದಿ ಸಲ್ಲಿಲು ಅಟಾರ್ನಿ ಜನರಲ್‌ ಸಮಯಾವಕಾಶ ಕೇಳಿದರೂ ನ್ಯಾಯಪೀಠ ಮನವಿ ಪುರಸ್ಕರಿಸಲಿಲ್ಲ.

ಚೆಂಬು ಹಿಡಿದು ಪ್ರತಿಭಟನೆ: ಕೇಂದ್ರ ಸರಕಾರವು ನೀಡಿರುವ ಬರ ಪರಿಹಾರವು ಅತ್ಯಲ್ಪ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಭಾನುವಾರ ಬೆಂಗಳೂರಿನಲ್ಲಿ ಚೆಂಬು ಪ್ರದರ್ಶನ ಮಾಡಿ ಪ್ರತಿಭಟಿಸಿದ್ದರು. ಅಲ್ಲದೆ, ಬಾಕಿ 17,718 ಕೋಟಿ ರೂ. ಬಿಡುಗಡೆಗೆ ನಿರ್ದೇಶನ ಕೋರಿ ಮತ್ತೆ ಕೋರ್ಟ್‌ ಕದ ತಟ್ಟುವುದಾಗಿ ಹೇಳಿದ್ದರು


Share It

You cannot copy content of this page