ಬೆಂಗಳೂರು: ಮಾಜಿ ಸಚಿವ ಮತ್ತು ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲು ಸೇರಿ ಒಂದು ದಿನ ಕಳೆದಿದೆ. 66 ವರ್ಷಗಳ ಬದುಕನ್ನು ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸಿ ಈಗ ಸೆರೆವಾಸ ಅನುಭವಿಸಬೇಕಾಗಿ ಬಂದಿದ್ದರಿಂದ ರೇವಣ್ಣಗೆ ಅಕ್ಷರಶಃ ಗಾಬರಿ ಮೂಡಿಸಿದೆ.
ಬೆಂಗಳೂರಿನ ಸೆಂಟ್ರಲ್ ಜೈಲಿನ ಮೂಲಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ರೇವಣ್ಣ ಹೈಪರ್ ಅಸಿಡಿಟಿಯಿಂದ ಬಳಲುತ್ತಿದ್ದಾರೆ. ಹಾಗಾಗೇ, ಅವರ ಆರೋಗ್ಯ ವಿಚಾರಿಸಲು ಇಬ್ಬರು ಜೆಡಿಎಸ್ ಶಾಸಕರು ಇಂದು ಗುರುವಾರ ಸೆಂಟ್ರಲ್ ಜೈಲಿಗೆ ಧಾವಿಸಿ ಬಂದರು. ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ. ಮಂಜು ಮತ್ತು ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್ ಬಾಲಕೃಷ್ಣ ಜೈಲಿಗೆ ಆಗಮಿಸಿದ್ದರು.
ಜೈಲಿನ ವೈದ್ಯಧಿಕಾರಿಗಳು ರೇವಣ್ಣ ಅವರಿಗೆ ಮಾತ್ರೆ ನೀಡಿರುತ್ತಾರೆ ಅದು ಬೇರೆ ವಿಷಯ. ಆದರೆ ರೇವಣ್ಣ ಮಾನಸಿಕವಾಗಿ ವಿಪರೀತ ಬಳಲಿರುತ್ತಾರೆ. ಜೈಲಿನ ವಾತಾವರಣವೇ ಹಾಗೆ, ಎಂತೆಂಥವರನ್ನೂ ಮೆತ್ತಗಾಗಿಸಿ ಬಿಡುತ್ತದೆ. ತಮ್ಮ ಪಕ್ಷದ ಶಾಸಕರನ್ನು ನೋಡಿದ ಬಳಿಕ ರೇವಣ್ಣ ನಿಸ್ಸಂದೇಹವಾಗಿ ಕೊಂಚ ಗೆಲುವಾಗಿರುತ್ತಾರೆ.
ನಾವು ನಿನ್ನೆ ವರದಿ ಮಾಡಿದ ಹಾಗೆ ರೇವಣ್ಣರ ಜಾಮೀನು ಅರ್ಜಿ ತಿರಸ್ಕರಿಸಿದ ನಗರದ ನ್ಯಾಯಾಲಯವೊಂದು ಅವರನ್ನು ಮೇ 14 ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತು.