ರಾಜಕೀಯ ಸುದ್ದಿ

ಚಾಮರಾಜನಗರ ಲೋಕಸಭಾ ಕ್ಷೇತ್ರ: ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ಮರುಮತದಾನ

Share It

ಚಾಮರಾಜನಗರ : ಲೋಕಸಭಾ ಚುನಾವಣೆಯ ಕರ್ನಾಟಕದ ಮೊದಲ ಹಂತದ ಮತದಾನದ ವೇಳೆ ಗಲಭೆಗೆ ಸಾಕ್ಷಿಯಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಒಂದು ಮತಗಟ್ಟೆಯಲ್ಲಿ ಮರುಮತದಾನ ನಡೆಯಲಿದೆ.

ಇಂಡಿಗನತ್ತ ಗ್ರಾಮದ ಬೂತ್ ನಂಬರ್ 146ರಲ್ಲಿ ಏಪ್ರಿಲ್ 29ರಂದು ಸೋಮವಾರ ಮರು ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮರು ಮತದಾನ ನಡೆಯಲಿದೆ. ಶುಕ್ರವಾರ ಮತದಾನದ ವೇಳೆ ಈ ಮತಗಟ್ಟೆ ಬಳಿ ಉಂಟಾದ ಗಲಭೆಯಲ್ಲಿ ಇವಿಎಂ ಧ್ವಂಸಗೊಳಿಸಲಾಗಿತ್ತು.

ಮತದಾನ ಮಾಡುವ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳು ಮತ್ತು ಇಂಡಿಗನತ್ತ ಗ್ರಾಮಸ್ಥರ ನಡುವೆ ಗಲಾಟೆಯಾಗಿತ್ತು. ಮೂಲ ಸೌಕರ್ಯ ಒದಗಿಸುವವರೆಗೆ ಮತದಾನ ಮಾಡುವುದಿಲ್ಲ ಎಂದಿದ್ದರೂ ಸಹ ಕೆಲವು ಮಂದಿ ಗ್ರಾಮಸ್ಥರನ್ನು ಅಧಿಕಾರಿಗಳು ಮನವೊಲಿಸಿ ಮತದಾನಕ್ಕೆ ಕರೆತಂದಿದ್ದರು. ಇದರಿಂದ ರೊಚ್ಚಿಗೆದ್ದ ಇನ್ನಿತರ ಗ್ರಾಮಸ್ಥರು ಮತಕೇಂದ್ರದ ಮೇಲೆ ದಾಳಿ ಮಾಡಿದ್ದರು.

ಮತದಾನದ ವೇಳೆ ನಡೆದಿದ್ದೇನು?
ಮೂಲ ಸೌಕರ್ಯವನ್ನು ಕಲ್ಪಿಸದ ವಿಚಾರವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದರು. ಯಾರೊಬ್ಬರೂ ಮತದಾನಕ್ಕೆ ಬಾರದೆ ಇರುವುದರಿಂದ ಶೂನ್ಯ ಮತದಾನವಾಗುವ ಆತಂಕ ಅಧಿಕಾರಿಗಳದ್ದಾಗಿತ್ತು. ಹೀಗಾಗಿ ಅಧಿಕಾರಿಗಳು ಹಾಡಿ ಜನರನ್ನು ಮನವೊಲಿಸಿ ಕರೆತಂದು ಮತದಾನ ಮಾಡಿಸಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂಡಿಗನತ್ತ ಗ್ರಾಮದ ಮತಗಟ್ಟೆಯನ್ನು ಸುತ್ತುವರಿದಿದ್ದು, ಮೂಲಸೌಕರ್ಯ ಕಲ್ಪಿಸುವವರೆಗೆ ಮತದಾನ ಮಾಡಬೇಡಿ ಆಗ್ರಹಿಸಿದ್ದರು. ಈ ವೇಳೆ, ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆ ಮೇಲೆ ದಾಳಿ ಮಾಡಿ ಮೇಜು, ಕುರ್ಚಿ, ಇವಿಎಂ ಧ್ವಂಸ ಮಾಡಿದ್ದರು.

ನಂತರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಶಿಲ್ಪಾನಾಗ್, ಘಟನೆ ನಡೆದ ತಕ್ಷಣ ಮುಖ್ಯ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದೇವೆ. ಎಫ್​ಐಆರ್ ಕಾಪಿ ಸಮೇತ ಈಗಾಗಲೇ ರಿಪೋರ್ಟ್ ಕಳುಹಿಸಲಾಗಿದೆ. ಇಂಡಿಗನತ್ತ ಗ್ರಾಮದಲ್ಲಿ ಬಹುಶಃ ಮರು ಮತದಾನ ನಡೆಯುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು.


Share It

You cannot copy content of this page