ರಾಜಕೀಯ ಸುದ್ದಿ

ಬೆಳಗಾವಿಯಲ್ಲಿ ಯುಗಾದಿ ಹಬ್ಬದ ದಿನ ಜಗದೀಶ್ ಶೆಟ್ಟರ್ ಗೃಹ ಪ್ರವೇಶ

Share It

ಬೆಳಗಾವಿ, ಏಪ್ರಿಲ್​ 9: ಲೋಕಸಭೆ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಮರಳಿ ತಮ್ಮ ಗೂಡು ಸೇರಿಕೊಂಡಿದ್ದರು. ಬಳಿಕ ಅಂತಿಮ ಗಳಿಗೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಹ ಪಡೆದುಕೊಂಡಿದ್ದಾರೆ. ಇದೀಗ ಲೋಕಸಭಾ ಚುನಾವಣೆಗಾಗಿ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿರುವ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​, ಯುಗಾದಿ ಹಬ್ಬದಂದೇ ಗೃಹ ಪ್ರವೇಶ ನೆರವೇರಿಸಿದ್ದಾರೆ.

ಜಗದೀಶ್ ಶೆಟ್ಟರ್ ಹೊರಗಿನವರು, ವಿಳಾಸ ಹೇಳಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸವಾಲು ಹಾಕಿದ್ದ ಬೆನ್ನಲ್ಲೇ ಇದೀಗ ಮನೆ ಮಾಡುವ ಮೂಲಕ ಶೆಟ್ಟರ್ ತಿರುಗೇಟು ನೀಡಿದಂತಿದೆ.

ಈ ಬಗ್ಗೆ ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು ‘ಇಂದು ಯುಗಾದಿ ಹಿನ್ನೆಲೆ ಗೃಹ ಪ್ರವೇಶ ಮಾಡಿದ್ದೇನೆ. ಬೆಳಗಾವಿಯಲ್ಲಿ ನಾನು ಕಚೇರಿಯನ್ನೂ ತೆರೆಯುತ್ತೇನೆ. ವಿಪಕ್ಷದವರಿಗೆ ಉತ್ತರ ಕೊಡುವುದಕ್ಕೆ ಮನೆ ಮಾಡಿಲ್ಲ. ನಾನು ಮನೆ ಮಾಡುವುದಾಗಿ ಹೇಳಿದ್ದೆ, ಮಾಡಿದ್ದೇನೆ’ ಎಂದು ಹೇಳಿದರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಬಿಜೆಪಿ ಬೈದಿಲ್ಲ. ಪ್ರಧಾನಿ ಮೋದಿ, ಬಿ.ಎಸ್​ ಯಡಿಯೂರಪ್ಪ, ಬಿಜೆಪಿ ಪಕ್ಷ ಟೀಕಿಸಿಲ್ಲ. ಸುಮ್ಮನೆ ಸುಳ್ಳು ಹೇಳಿಕೆ ನೀಡಬಾರದು. ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಟೀಕೆ ಮಾಡೋದಿಲ್ಲ. ಟೀಕಿಸಿದ್ರೆ ದೊಡ್ಡವರಾಗಬಹುದೆಂದು ಟೀಕಿಸ್ತಿರಬಹುದು. ಬೆಳಗಾವಿಯಲ್ಲಿ ನನಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗ್ತಿದೆ. ಎಲ್ಲ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಪಂಚಮಸಾಲಿ ವೋಟ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಶೆಟ್ಟರ್ ಅವರು, ‘ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರಧಾರೆ ಮೇಲೆ ಚುನಾವಣಾ ಆಗುತ್ತೆ. ಇದು ಜಾತಿ ಧರ್ಮದ ಮೇಲೆ ನಡೆಯುವ ಚುನಾವಣೆ ಅಲ್ಲ ಎಂದು ಸಮಜಾಯಿಷಿ ಹೇಳಿದರು.

‘ವಿಧಾನಸಭೆ, ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್​, ಪಂಚಾಯಿತಿ ಜಾತಿ ಸ್ಥಳೀಯ ನಾಯಕತ್ವ ಮೇಲೆ ನಡೆಯುತ್ತೆ. ಈ ಚುನಾವಣೆ ಜಾತಿ ಆಧಾರದ ಮೇಲೆ‌ ನಡೆಯಲ್ಲ ಎಂದು ಬೆಳಗಾವಿ ಬಿಜೆಪಿ ಅಭ್ಯರ್ಥಿ ಶೆಟ್ಟರ್ ಹೇಳಿದರು.


Share It

You cannot copy content of this page