ನವದೆಹಲಿ: 27 ವಾರಗಳ ನಂತರ ಒಡಲಲ್ಲಿರುವ ಮಗುವಿಗೆ ಬದುಕುವ ಹಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವಿವಾಹಿತೆ ಎಂಬ ನೆಪವೊಡ್ಡಿ ಮಗುವಿನ ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
20 ವರ್ಷದ ಅವಿವಾಹಿತೆ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ೨೭ ವಾರಗಳ ಮಗುವಿನ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎಸ್.ವಿ.ಎನ್. ಭಟ್ಟಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಒಡಲಲ್ಲಿರುವ ಮಗುವಿಗೂ ಬದುಕುವ ಹಕ್ಕಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶ ನೀಡಲಾಗದು. ನ್ಯಾಯಾಲಯವು ಕಾನೂನಿಗೆ ವಿರುದ್ಧವಾಗಿ ಯಾವುದೇ ಆದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಗರ್ಭದಲ್ಲಿರುವ ಮಗುವಿಗೆ ಬದುಕುವ ಮೂಲಭೂತ ಹಕ್ಕಿದೆಯಲ್ಲವೇ, ಗರ್ಭಪಾತಕ್ಕೆ ಹೇಗೆ ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಗರ್ಭಾವಸ್ಥೆ ಅವದಿ ಈಗ 7 ತಿಂಗಳು ಮೀರಿದೆ. ಈ ಹಂತದಲ್ಲಿ ಮಗುವಿನ ಬದುಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅದರ ಹಕ್ಕಿನ ಹರಣ ಮಾಡಿದಂತಾಗುತ್ತದೆ ಎಂದು ಹೇಳಿತು.
ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ಎಂಟಿಪಿ) ಕಾಯಿದೆಯು ತಾಯಿಗೆ ಮಾತ್ರ ಸಂಬAಧಿಸಿದ್ದಾಗಿದೆ ಎಂದು ವಾದಿಸಿದ ವಕೀಲರು ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಅವಿವಾಹಿತೆ ತೀವ್ರ ಆಘಾತದಲ್ಲಿದ್ದಾರೆ. ಅದರಿಂದ ಹೊರಬರಲು ಸಾಧ್ಯವಿಲ್ಲ. ವಿವಾಹಕ್ಕೂ ಮೊದಲು ಗರ್ಭಧಾರಣೆ ಆಗಿದ್ದು, ಸಮಾಜವನ್ನು ಆಕೆ ಎದುರಿಸಲು ಸಾಧ್ಯವಿಲ್ಲ ಎಂದು ವಾದಿಸಿದರೆ, ಈ ಕಾರಣಕ್ಕೆ ಮಾತ್ರ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಗರ್ಭಪಾತಕ್ಕೆ ನಿರಾಕರಿಸಿತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿ: ದೆಹಲಿ ಹೈಕೋರ್ಟ್ ಗರ್ಭಪಾತಕ್ಕೆ ಅವಕಾಶ ನೀಡದ ಕಾರಣಕ್ಕೆ ಯುವತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ದೆಹಲಿ ಹೈಕೋರ್ಟ್ ಆಕೆಯ ಮನವಿ ತಿರಸ್ಕರಿಸುವ ಜತೆಗೆ ಭ್ರೂಣ ಮತ್ತು ಅವಿವಾಹಿತೆಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ತಪಾಸಣೆ ನಡೆಸಿದ್ದ ವೈದ್ಯಕೀಯ ಮಂಡಳಿ, ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ. ಗರ್ಭಧಾರಣೆ ಮುಂದುವರಿಸಿದಲ್ಲಿ ತಾಯಿಗೂ ಯಾವುದೇ ಅಪಾಯವಿಲ್ಲ ಎಂದು ವರದಿ ನೀಡಿತ್ತು.