ಉಪಯುಕ್ತ ಸುದ್ದಿ

ಬಿಸಿಲ ಝಳಕ್ಕೆ ಬಸ್ ಗಾಜು ಪುಡಿಪುಡಿ

Share It

ಬಂಟ್ವಾಳ : ರಾಜ್ಯದಲ್ಲಿ ಉರಿಬಿಸಿಲಿನ ತಾಪ ಅದೆಷ್ಟಿದೆಯೆಂದರೆ, ಇಲ್ಲಿ ಉರಿಮಜಲು ಗ್ರಾಮದಲ್ಲಿ ಬಿಸಿಲಿನ ಶಾಖಕ್ಕೆ ಬಸ್ ಗಾಜು ಪುಡಿಪುಡಿಯಾಗಿ ಮೂರು ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉರಿಮಜಲು ಗ್ರಾಮದಲ್ಲಿ ಕೇರಳ ರಾಜ್ಯ ರಸ್ತೆ ನಿಗಮದ ಮಲಬಾರ್ ಬಸ್ಸಿನ ಮುಂಭಾಗದ ಗಾಜು ಒಡೆದ ಪರಿಣಾಮ, ಇಬ್ಬರು ಮಕ್ಕಳು ಸೇರಿ ಚಾಲಕ ಗಾಯಗೊಂಡ ಘಟನೆ ನಡೆದಿದೆ. ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ.

ಬಸ್ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬಾಲಕರು ಹಾಗೂ ಬಸ್ ಚಾಲಕ ಗಾಯಗೊಂಡಿದ್ದು, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಕಾಸರಗೋಡು ನೆಲ್ಲಿಕಟ್ಟೆಯವನು ಎಂದು ತಿಳಿದುಬಂದಿದೆ.

ಬಿಸಿಲಿನ ತಾಪಕ್ಕೆ ಅನೇಕ ರೂಪದಲ್ಲಿ ಸಆವು ನೋವುಗಳಾಗುತ್ತಿವೆ. ಕಬಕ ಹೊರವಲಯದ ಉರಿಮಜಲು ಎಂಬಲ್ಲಿ ಆಟೋ ಚಾಲಕರೊಬ್ಬರು ಮಲಗಿದ್ದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೇ ೩ರಂದು ಮಧ್ಯಾಹ್ನ ಮಸೀದಿಯಲ್ಲಿ ನಮಾಜ್ ಮುಗಿಸಿ ಮನೆಗೆ ಬಂದಿದ್ದ ಅಶ್ರಫ್ (೩೮) ವಿಶ್ರಾಂತಿಗಾಗಿ ಬಾಗಿಲು ಹಾಕಿಕೊಂಡು ಮಲಗಿದ್ದರು. ಸಂಜೆ ಅವರ ಪತ್ನಿ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಇತರರಿಗೆ ವಿಷಯ ತಿಳಿಸಿ ಬಾಗಿಲು ತೆರೆದಾಗ ಅಶ್ರಫ್ ಮಲಗಿದ್ದಲ್ಲೇ ಮೃತಪಟ್ಟಿದ್ದರು.

ಮನೆಯಲ್ಲಿ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ ಏತಡ್ಕ ಕುಬ್ಡಾಜೆ ನಿವಾಸಿ ರಾಧಾಕೃಷ್ಣ ಭಟ್ ಮತ್ತು ಪ್ರೇಮಲತಾ ದಂಪತಿ ಪುತ್ರ ಪ್ರಜ್ವಲ್ (೨೬) ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ಮನೆಯಲ್ಲಿ ಕುಸಿದುಬಿದ್ದಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದರು.

ಕಾಸರಗೋಡು ಜಿಲ್ಲೆಯ ಪೆರ್ಲ ಪೇಟೆ ವ್ಯಾಪಾರಿ ಸಾದಿಕ್ (೩೫) ಮನೆಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ೯.೩೦ರ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಅವರು, ಅಂದು ರಾತ್ರಿ ೧೦.೩೦ಕ್ಕೆ ಹೃದಯಾಘಾತವಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಕಾಸರಗೋಡಿಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದರು. ಇವರು ಸ್ಥಳೀಯ ವ್ಯಾಪಾರಿಯಾಗಿದ್ದರು.


Share It

You cannot copy content of this page