ರಾಜಕೀಯ ಸುದ್ದಿ

ತಮಿಳುನಾಡಿನಲ್ಲಿ ಕೊನೆಗೂ ಗೆದ್ದ ಸೈದ್ಧಾಂತಿಕ ನಿಲುವು: ಅಲ್ಲಿ ಕಳೆದೆರೆಡು ದಿನದಲ್ಲಿ ನಡೆದಿದ್ದೇನು?

Share It

ಬೆಂಗಳೂರು: ತಮಿಳುನಾಡಿನಲ್ಲಿ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಗುರುವಾರವೇ ವಿಜಯ್ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಬೇಕಿತ್ತು. ಆದರೆ, ಅವರು ಎರಡು ದಿನ ತಡವಾಗಿ ಸಿಎಂ ಆಗಬೇಕಾಯ್ತು?

ಇದಕ್ಕೆ ಕಾರಣವೇನು ಗೊತ್ತಾ? ಒಂದೇ ಕ್ಷೇತ್ರದಲ್ಲಿ ಗೆದ್ದಿದ್ದರೂ, ಏನಾದ್ರೂ ಮಾಡಬಹುದಾ ಎಂದು ವಾಮಮಾರ್ಗಕ್ಕೆ ಕೈಹಾಕಿದ ಬಿಜೆಪಿಯ ನಡೆ.

ವಿಜಯ್ 107 ಸ್ಥಾನ ಗೆಲ್ಲುತ್ತಿದ್ದಂತೆ ಡಿಎಂಕೆ ಜತೆಯಿದ್ದ ಕಾಂಗ್ರೆಸ್ ತನ್ನ ಏಳು ಶಾಸಕರ ಬೆಂಬಲವನ್ನು ವಿಜಯ್‌ಗೆ ನೀಡುವ ಮೂಲಕ ತಾನು ಸೈದ್ಧಾಂತಿಕವಾಗಿ ಬಿಜೆಪಿ ವಿರೋಧಿ ಎಂದು ಸಾಭೀತು ಮಾಡಿಕೊಳ್ಳುವ ಪ್ರಯತ್ನ ನಡೆಸಿತು.

ಕಾಂಗ್ರೆಸ್ ಬೆಂಬಲದ ನಡುವೆಯೂ ವಿಜಯ್‌ಗೆ 4 ಶಾಸಕರ ಬೆಂಬಲದ ಕೊರತೆ ಕಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಇದನ್ನೇ ನೆಪವಾಗಿಟ್ಟುಕೊಂಡು, ಸಂಪೂರ್ಣ ಬಹುಮತವಿಲ್ಲ. ಹೀಗಾಗಿ, ಸರಕಾರ ರಚನೆಗೆ ಅವಕಾಶ ಕೊಡುವುದಿಲ್ಲ ಎಂಬಂತೆ ವರ್ತಿಸಿದರು.

ಇದೀಗ ಎರಡು ದಿನಗಳ ನಂತರ ಅದೇ ರಾಜ್ಯಪಾಲರು ವಿಜಯ್ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾದ್ರೆ, ಈ ಎರಡು ದಿನ ನಡೆದಿದ್ದಾದ್ರೂ ಏನು?

ವಿಜಯ್ ತಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೆ ಬಿಜೆಪಿಯನ್ನು ತೆಗಳುತ್ತಾ. ಕೇಂದ್ರ ಸರಕಾರದ ಜಿಎಸ್‌ಟಿ ನೀತಿ, ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ, ಅಲ್ಲಲ್ಲಿ, ಸಿನಿಮಾಗಳಲ್ಲಿ ಡೈಲಾಗ್ ಹೊಡೆಯುತ್ತಿದ್ದರು.

ಇದು ಕೇಂದ್ರ ಸರಕಾರದ ಕಣ್ಣು ಕುಕ್ಕಿ ಅವರ ಮೇಲೆ ಐಟಿ, ಇಡಿ ದಾಳಿ ನಡೆಸುವ ಮೂಲಕ ಅವರನ್ನು ಸುಮ್ಮನಿರಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ, ಸೈಲೆಂಟ್ ಆಗಿಯೇ ಇದ್ದ ವಿಜಯ್ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಹುದೊಡ್ಡ ಮರ್ಮಾಘಾತ ನೀಡಿದ್ದರು.

ಚುನಾವಣೆ ದಿನ ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆ ಸೈಕಲ್ ಏರಿದ್ದ ದಳಪತಿ, ಮುಖಕ್ಕೆ ಮಾಸ್ಕ್‌ ಹಾಕಿಕೊಂಡೇ ಒಂದು ಮಾತೂ ಆಡದೆ, ಪೆಟ್ರೋಲ್ ಬೆಲೆ ವಿರುದ್ಧ ತಮಿಳುನಾಡಿನ ಜನತೆ ಮತ ಹಾಕುವಂತೆ ಕರೆ ಕೊಟ್ಟಿದ್ದರು. ಇದರ ಪರಿಣಾಮ ಏನಾಯ್ತು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಹೀಗಾಗಿ, ಬಿಜೆಪಿ ಅವರನ್ನು ವಿರೋಧಿಸುತ್ತಲೇ ಬರುತ್ತಿತ್ತು.

ಇದೀಗ ವಿಜಯ್ ಸಿಎಂ ಆದ್ರೂ ಕೂಡ ಕೇಂದ್ರದ ವಿರುದ್ಧ ಡಿಎಂಕೆಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಾಗಿಯೇ ಮುಗಿಬೀಳ್ತಾರೆ. ನಾಡು, ನುಡಿ ಮತ್ತು ಪ್ರಾದೇಶಿಕತೆ ವಿಚಾರದಲ್ಲಿ ವಿಜಯ್ ಸರಕಾರ ಕೇಂದ್ರಕ್ಕೆ ಎಂದಿಗೂ ಮುಳುವಾಗಿಯೇ ಇರಲಿದೆ ಎಂಬುದು ಬಿಜೆಪಿಗೆ ಅರಿವಾಗಿದೆ.

ಹೀಗಾಗಿ, ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರ ಬಳಸಿಕೊಂಡು ಡಿಎಂಕೆಯನ್ನು ಸೆಳೆದು, ತನ್ನ ಮಿತ್ರ ಪಕ್ಷ ಎಐಡಿಎಂಕೆ ಜತೆಗೆ ಮೈತ್ರಿ ಸರಕಾರ ರಚನೆ ಮಾಡುವಂತೆ ಮಾಡುವ ಪ್ರಯತ್ನ ತಮಿಳುನಾಡಿನಲ್ಲಿ ನಡೆದಿತ್ತು ಎನ್ನಲಾಗಿದೆ. ಇದರ ಭಾಗವಾಗಿಯೇ ಎರಡು ದಿನಗಳ ಕಾಲ ರಾಜ್ಯಪಾಲರು ಟೈಂಪಾಸ್ ಮಾಡಿದ್ದು ಎನ್ನಲಾಗಿದೆ.

ಆದರೆ, ಬಿಜೆಪಿಯ ಈ ಕಳ್ಳಾಟಕ್ಕೆ ಸೊಪ್ಪು ಹಾಕದ ಡಿಎಂಕೆ ನಾಯಕರು ತನ್ನ ದ್ರಾವಿಡ ಸಿದ್ಧಾಂತದ ವಿರುದ್ಧ ತಾನೆಂದೂ ಹೋಗಲಾರೆ ಎಂದು ಪಟ್ಟು ಹಿಡಿದಿದ್ದು ಮತ್ತು ಬಿಜೆಪಿಯ ರಾಜಕೀಯ ಸಿದ್ಧಾಂತದ ವಿರೋಧಿಗಳಾದ ಸಿಪಿಎಂ ಮತ್ತಿತರ ಸಣ್ಣ ಪಕ್ಷಗಳು ವಿಜಯ್‌ಗೆ ಬೆಂಬಲ ಕೊಟ್ಟ ಪರಿಣಾಮವಾಗಿ ವಿಜಯ್ ಅವರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಯಿತು.

ಆದರೆ, ಎರಡು ದಿನ ಬಿಜೆಪಿ ರಾಷ್ಟ್ರೀಯ ನಾಯಕರು ಸೇರಿ ಅನೇಕರು, ಇಂತಹದ್ದೊಂದು ಕಸರತ್ತಿಗೆ ಕೈಹಾಕಿ, ವಿಜಯ್ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನ ನಡೆಸಿದ್ದು ಸುಳ್ಳಲ್ಲ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರಕಾರಕ್ಕೆ ಸದಾ ತಲೆನೋವಾಗಿರುವ ತಮಿಳುನಾಡು ಸರಕಾರ ಮುಂದೆ ಕೇಂದ್ರಕ್ಕೆ ಮತ್ತಷ್ಟು ಮುಳ್ಳುಗಂಟಾಗುವುದು ಶತಸಿದ್ಧ ಎನ್ನಬಹುದು.


Share It

You cannot copy content of this page