ಬೆಂಗಳೂರು: ಕೆಎಸ್‌ಆರ್‌ಟಿಸಿ ನಡೆಯುತ್ತಿರುವ ನೇಮಕಾತಿ ನೇರವಾಗಿ ಪರೀಕ್ಷೆಯ ಮೆರಿಟ್ ಮತ್ತು ಅಧಿಸೂಚನೆಯ ಮಾರ್ಗಸೂಚಿಗಳನ್ವಯವೇ ನಡೆಯಲಿದ್ದು, ಮಧ್ಯವರ್ತಿಗಳು ಮತ್ತು ಶಿಫಾರಸ್ಸಿಗೆ ಅವಕಾಶವಿಲ್ಲದಂತೆ ಆಯ್ಕೆ ಪ್ರಕ್ರಿಯೆ ನಡೆಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾದ ನಂತರ ಕೆಎಸ್ ಆರ್‌ಟಿಸಿಯಲ್ಲಿ ಅನೇಕ ಸುಧಾರಣೆಗಳನ್ನು ತರುತ್ತಿದ್ದು, ಹೊಸ ಹುದ್ದೆಗಳ ನೇಮಕವನ್ನು ಆರಂಭಿಸಿದ್ದರು. ಇದೀಗ, ಈ ಹುದ್ದೆಗಳ ಆಯ್ಕೆಗೆ ಯಾವುದೇ ಮಧ್ಯವರ್ತೀಗಳ ಹಸ್ತಕ್ಷೇಪವಿಲ್ಲದಂತೆ ಪಾರದರ್ಶಕ ನೇಮಕಾತಿ ವ್ಯವಸ್ಥೆ ಜಾರಿಗೆ ಪ್ರಯತ್ನಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ಕೆಎಸ್‌ಆರ್‌ಟಿಸಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರೆದಿರುವ ಡ್ರೈವರ್ ಕಂಡಕ್ಟರ್ ಹುದ್ದೆಗಳಗೆ ಸಂಬಂಧಿಸಿದ ಮೂಲ ದಾಖಲಾತಿ ಪರಿಶೀಲನೆ ಹಾಗೂ ದೇಹದಾರ್ಢ್ಯತೆ ಪರಿಶೀಲನೆ ಆರಂಭವಾಗಿದ್ದು, ಮೇ ೧೫ ರಿಂದ ಆರಂಭವಾಗಲಿದೆ.
ಅಭ್ಯರ್ಥಿಗಳು(ಇಂದಿನಿಂದ) ಮೇ ೮ ರಿಂದ ನಿಗಮದ ಅಧಿಕೃತ ವೆಬ್‌ಸೈಟ್ https://ksrtcjobs.karnataka.gov.in ರಲ್ಲಿ ಕರಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಕರಪತ್ರದಲ್ಲಿ ತಿಳಿಸಿರುವ ಮೂಲ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಆದರೆ, ಈಗಾಗಲೇ ಗಣಕೀಕೃತ ಚಾಲನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಅಧಿಸೂಚನೆಯಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪಾರದರ್ಶಕವಾಗಿಯೇ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಶೀಫಾರಸ್ಸು ಪತ್ರ ತರುವುದು, ಮಧ್ಯಮರ್ತಿಗಳ ಮೂಲಕ ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುವುದನ್ನು ಮಾಡಬಾರದು ಎಂದು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.