ಮಂಗಳೂರು: ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ೬೪೪ ಗ್ರಾಂ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ನಿವಾಸಿಯೊಬ್ಬ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದ ಮೂಲಕ ಬಂದಿಳಿದಿದ್ದರು. ಈ ಪ್ರಯಾಣಿಕನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ.
ಬಳಿಕ ಆತನಿಂದ ಮೂರು ಅಂಡಾಕಾರದ ಒಟ್ಟು ೬೪೪ ಗ್ರಾಂ ತೂಕದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ವಸ್ತುಗಳು ಏನು ಎಂಬುದೇ ಗೊತ್ತಾಗದಂತೆ ಅದನ್ನು ರೂಪಿಸಿ, ಕಳ್ಳಸಾಗಾಣೆ ಮಾಡಲಾಗುತ್ತಿತ್ತು.
ಆ ಅಂಡಾಕಾರದ ವಸ್ತುಗಳನ್ನು ತೆಗೆದು ನೋಡಿದಾಗ ರೂ.೪೦,೪೦,೨೨೦ ಮೌಲ್ಯದ ೫೭೮ ಗ್ರಾಂ ತೂಕದ ೨೪ ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.