ತುಮಕೂರು: ಮಾಧುಸ್ವಾಮಿ ಮನೆಗೆ ಕೈ ಅಭ್ಯರ್ಥಿ ಭೇಟಿ!
ತುಮಕೂರು: ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ತುಮಕೂರು ಕ್ಷೇತ್ರದ ಟಿಕೆಟ್ ವಿ.ಸೋಮಣ್ಣ ಅವರಿಗೆ ನೀಡಿದ್ದರಿಂದ ಆಕ್ರೋಶಗೊಂಡಿರುವ ಜೆ.ಸಿ ಮಾಧುಸ್ವಾಮಿ ಅವರು, “ವಿ. ಸೋಮಣ್ಣ ನಮ್ಮ ಮನೆಗೆ ಬರಬೇಡಿ, ನಾನು ನಿಮ್ಮ ಪರ ಪ್ರಚಾರ ಮಾಡುವುದಿಲ್ಲ” ಅಂತ ಬಹಿರಂಗವಾಗಿಯೇ ಹೇಳಿದ್ದರು.
ಇದೀಗ ಮಾಜಿ ಸಚಿವ ಮಾಧುಸ್ವಾಮಿ ಅವರ ಮನೆಗೆ ತುಮಕೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ತುಮಕೂರು ಬಿಜೆಪಿ ಘಟಕದಲ್ಲಿನ ಭಿನ್ನಮತ ಶಮನವಾಗಿಲ್ಲವೆಂಬುವುದು ಎದ್ದು ಕಾಣುತ್ತಿದೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ತಮ್ಮ ಮನೆಗೆ ಭೇಟಿ ನೀಡಿದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಧುಸ್ವಾಮಿ, ಮುದ್ದಹನುಮೇಗೌಡ ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ಮುದ್ದಹನುಮೇಗೌಡ, ನಾನು ಒಳ್ಳೆಯ ಸ್ನೇಹಿತರು. ಸ್ನೇಹಿತರು ಅಂತ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅಭ್ಯರ್ಥಿ ಆದವರು ಬೆಂಬಲ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು ಬೆಂಬಲ ಕೊಡುವುದಕ್ಕೆ ಆಗುತ್ತಾ? ಅದೆಲ್ಲಾ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಬಿಜೆಪಿ ಬಿಡಲ್ಲ, ಸೋಮಣ್ಣ ಪರ ಪ್ರಚಾರ ಮಾಡಲ್ಲ…
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆ.ಸಿ ಮಾಧುಸ್ವಾಮಿ ಅವರು ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಎದ್ದಿದ್ದವು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತುರುವೇಕೆರೆ ಹೊರವಲಯದಲ್ಲಿರುವ ಮಾಜಿ ಶಾಸಕ ಮಸಾಲಾ ಜಯರಾಂ ತೋಟದ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾಧುಸ್ವಾಮಿ ಅವರನ್ನು ಸಮಾಧಾನಪಡಿಸಿದ್ದರು. ಇದರೊಂದಿಗೆ ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ತಡೆದಿದ್ದರು. ಆದರೆ ಮಾಧುಸ್ವಾಮಿ ಮುನಿಸು ಮಾತ್ರ ತಣ್ಣಗಾಗಿಲ್ಲ. ಹೌದು ಮತ್ತೆ ಅವರು ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಬೆಂಬಲ ಇಲ್ಲ ಎಂದಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಜೆ.ಸಿ ಮಾಧುಸ್ವಾಮಿ ಚಿಂತಕರ ಚಾವಡಿಯ ಪ್ರಮುಖ ನಾಯಕರು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಪಕ್ಷಗಳ ವಾಗ್ದಾಳಿಗೆ ಗುರಾಣಿಯಂತೆ ಬಳಕೆಯಾಗುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಜೆ.ಸಿ ಮಾಧುಸ್ವಾಮಿ ಅವರು ರಾಜಕೀಯದಿಂದ ಸ್ವಲ್ಪ ದೂರ ಉಳಿದಿದ್ದರು. ಬಳಿಕ ಬಿ.ಎಸ್ ಯಡಿಯೂರಪ್ಪ ಅವರ ಒತ್ತಡ ಮೇರೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು. ಆದರೆ ವಿ.ಸೋಮಣ್ಣ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಹಜವಾಗಿಯೇ ಜೆ.ಸಿ ಮಾಧುಸ್ವಾಮಿ ಅಸಮಾಧಾನಗೊಂಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಭಿನ್ನಮತ
ಚುನಾವಣೆ ಹತ್ತಿರ ಬರುತ್ತಿದ್ದಂತೆ ಎನ್ಡಿಎ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ ತಲೆನೋವು ಶುರುವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ತುಮಕೂರು ಜಿಲ್ಲೆಯಲ್ಲಿ ಅಪಸ್ವರ ಕೇಳಿಬಂದಿದೆ. ವರಿಷ್ಠರ ಮಟ್ಟದಲ್ಲಿ ಸರಿ ಆದರೂ ಕೆಳಮಟ್ಟದಲ್ಲಿ ಹೊಂದಾಣಿಕೆ ಆಗಿಲ್ಲ. ಮಾಧುಸ್ಚಾಮಿ ಅಸಮಾಧಾನ ಬೆನ್ನಲ್ಲೇ ಜೆಡಿಎಸ್ನಲ್ಲೂ ಭಿನ್ನಮತ ಶುರುವಾಗಿದೆ.
ಜಿ.ಪಂ ಸದಸ್ಯ, ಜೆಡಿಎಸ್ ಮುಖಂಡ ಕಲ್ಲೇಶ್ ಅವರು ಮೈತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದೊಡ್ಡವರು ಹೋಗಿ ಮೈತ್ರಿ ಮಾಡಿಕೊಂಡು ಬರುತ್ತಾರೆ, ಆದರೆ ಕಾರ್ಯಕರ್ತರ ಗತಿ ಏನು? ಸಭೆ ನಡೆಸದೆ ಅಭಿಪ್ರಾಯ ಕೇಳದೆ ಮೈತ್ರಿ ಮಾಡಿಕೊಳ್ಳಲಾಗಿದೆ. ತುಮಕೂರು ಜಿಲ್ಲೆಯಲ್ಲಿ 1.5 ಲಕ್ಷ ಮತ ಇರುವ ಉಪ್ಪಾರ ಸಮಾಜವಿದೆ. ಶಾಸಕ ಸುರೇಶ್ ಬಾಬು ಕೂಡ ಸಭೆ ನಡೆಸಿ ಅಭಿಪ್ರಾಯ ಕೇಳಿಲ್ಲ. ನಮ್ಮ ಸಮುದಾಯವನ್ನ ಗಣನೆಗೆ ತೆಗೆದುಕೊಂಡಿಲ್ಲ. ಕಳೆದ ಬಾರಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. ಈಗ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾರೆ. ವಿ.ಸೋಮಣ್ಣ ಸಭೆ ನಡೆಸಿ ಕಾರ್ಯಕರ್ತರನ್ನು ಕರೆದಿಲ್ಲ ಎಂದು ಉಪ್ಪಾರ ಸಮಾಜದ ಮುಖಂಡ ಕಲ್ಲೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.