ದಾವಣಗೆರೆ: ವಾಹನಗಳಿಗೆ ಅನಧಿಕೃತವಾಗಿ ಎಲ್ಪಿಜಿ ತುಂಬಿಸುತ್ತಿದ್ದ ಘಟಕದಲ್ಲಿ ಭಾರಿ ಅವಘಡ ಸಂಭವಿಸಿದ್ದು, ವಾಹನ ಸಮೇತ ಸಿಲಿಂಡರ್ ಸ್ಫೋಟ ಸಂಭವಿಸಿರುವ ಘಟನೆ ಜಿಲ್ಲೆಯ ದೊಡ್ಡಬೂದಿಹಾಳ್ ಬಳಿ ನಡೆದಿದೆ.
ಭಾರಿ ಸ್ಫೋಟ ಸಂಭವಿಸಿಯೂ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ 2 ಸಲ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದ ಕಾರಣ ಅಕ್ಕಪಕ್ಕದ ಜನರು ಭಯಭೀತರಾಗಿ ಓಡಿಹೋಗಿದ್ದಾರೆ. ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಇಲ್ಲಿಯ ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ತುಂಬುತ್ತಿದ್ದರು. ಹೀಗೇ ಸೋಮವಾರ ಓಮಿನಿ ಕಾರು ಹಾಗೂ ರಿಕ್ಷಾದಲ್ಲಿ ಸಿಲಿಂಡರ್ಗೆ ಗ್ಯಾಸ್ ತುಂಬಿಸುವಾಗ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ವಿಚಾರ ತಿಳಿದು ಗಾಂಧಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, “ಘಟನೆ ದಾವಣಗೆರೆ ನಗರದ ದೊಡ್ಡಬೂದಿಹಾಳ್ ಬಳಿ ನಡೆದಿದ್ದು, ಅಕ್ರಮ ಗ್ಯಾಸ್ ಫಿಲ್ಲಿಂಗ್ ವ ವೇಳೆ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸಮೇತ ಓಮಿನಿ ಮತ್ತು ಆಟೋ ಎರಡು ಬಾರಿ ಬ್ಲಾಸ್ಟ್ ಆಗಿವೆ. ಆದರೆ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಅಡ್ಡೆ ಯಾರಿಗೆ ಸೇರಿದ್ದು ಎಂದು ಮಾತ್ರ ತಿಳಿದು ಬಂದಿಲ್ಲ. ಎಫ್ಐಆರ್ ದಾಖಲು ಮಾಡಿದ್ದು, ತನಿಖೆ ಬಳಿಕ ಎಲ್ಲಾ ವಿಚಾರ ತಿಳಿಯಲಿದೆ ಎಂದು ತಿಳಿಸಿದ್ದಾರೆ