ಚೈತ್ರ ನವರಾತ್ರಿಯ ಕೊನೆಯ ದಿನ ಅಂದರೆ ಈ ಬಾರಿ ಎ. 17 ರಂದು (ಇಂದು) ಭಾರತ ದೇಶಾದ್ಯಂತ ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ದಿನ ವಿಷ್ಣುವು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ಶ್ರೀರಾಮನು ಉತ್ತರ ಭಾರತದ ಅಯೋಧ್ಯೆಯಲ್ಲಿ ಸೂರ್ಯವಂಶಿ ಇಕ್ಷವಾಕು ವಂಶಕ್ಕೆ ಸೇರಿದವನು. ಈ ದಿನವು ತ್ರೇತಾ ಯುಗದಲ್ಲಿ ರಾಜ ದಶರಥ ಮತ್ತು ಅವನ ಮೊದಲ ಪತ್ನಿ, ರಾಣಿ ಕೌಸಲ್ಯೆಗೆ ಜನಿಸಿದ ಶ್ರೀರಾಮನ ಜನ್ಮದಿನವಾಗಿದೆ.
ಶ್ರೀರಾಮನವಮಿ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹಬ್ಬ. ಈ ದಿನ ರಾಮನನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟ, ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ನೈವೇದ್ಯದ ವಿಷಯಕ್ಕೆ ಬರುವುದಾದರೆ ಈ ಹಬ್ಬದ ದಿನ, ಕಡುಬು, ಪಾಯಸ, ಹೋಳಿಗೆ, ಚಕ್ಕುಲಿ ಮಾಡುವ ಬದಲು ಬೆಲ್ಲದ ಪಾನಕ, ಹೆಸರುಬೇಳೆ, ಕೋಸಂಬರಿ ಅಥವಾ ಕಿಚಡಿ, ಮಜ್ಜಿಗೆಯನ್ನು ನೈವೇದ್ಯ ಮಾಡಿ ಬಳಿಕ ಶ್ರೀರಾಮನ ಭಕ್ತರಿಗೆ ವಿತರಿಸಲಾಗುತ್ತದೆ. ಪುರಾಣಗಳಲ್ಲಿ ಹೇಳಿರುವ ಪ್ರಕಾರ ಈ ದಿನದಂದು ರಾಮನಿಗೆ ಬೆಲ್ಲದ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ನೈವೇದ್ಯ ಮಾಡಿದಲ್ಲಿ ಆತ ಸಂತೃಪ್ತನಾಗುತ್ತಾನೆ ಎನ್ನಲಾಗಿದೆ. ಹಾಗಾದರೆ ಯಾಕೆ ಈ ರೀತಿಯ ನೈವೇದ್ಯವನ್ನು ರಾಮನಿಗೆ ಅರ್ಪಣೆ ಮಾಡಬೇಕು? ಇದರ ಹಿಂದಿರುವ ವೈಜ್ಞಾನಿಕ, ಧಾರ್ಮಿಕ ಕಾರಣವೇನು?
ಬೆಲ್ಲದ ಪಾನಕ ನೈವೇದ್ಯ ಮಾಡುವುದರ ಹಿಂದಿದೆ ವೈಜ್ಞಾನಿಕ, ಧಾರ್ಮಿಕ ಕಾರಣ!
ಚೈತ್ರಮಾಸ ಯಾವಾಗಲೂ ಅತ್ಯಂತ ಉಷ್ಣಾಂಶದಿಂದ ಕೂಡಿರುತ್ತದೆ. ಈ ಬಿಸಿಲ ಧಗೆಯಿಂದ ತತ್ತರಿಸುತ್ತಿರುವಾಗ ತಣ್ಣನೆಯ ಬೆಲ್ಲದ ಪಾನಕ, ಮಜ್ಜಿಗೆ, ಹೆಸರುಬೇಳೆ ಕಿಚಡಿ ಅಥವಾ ಕೋಸಂಬರಿಯ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಈ ಪದಾರ್ಥಗಳು ದೇಹವನ್ನು ತಂಪಾಗಿಸುತ್ತದೆ ಎಂಬುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ. ಇನ್ನು ವಿಷ್ಣು ಪಾನಕ ಪ್ರೀಯ. ಇದನ್ನು ಪುರಾಣಗಳಲ್ಲಿಯೂ ವರ್ಣಿಸಲಾಗಿದೆ. ರಾಮ ಅವನ ಅವತಾರವಾಗಿರುವುದರಿಂದ ಅವನಿಗೆ ಪಾನಕ, ಮಜ್ಜಿಗೆಯನ್ನು ಅರ್ಪಣೆ ಮಾಡಲಾಗುತ್ತದೆ.