- ಚುನಾವಣಾ ಜಂಜಾಟದಿಂದ ಹೊರಬಂದ ಪ್ರಲ್ಹಾದ ಜೋಶಿ
- ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತ ಸಮಯ ಕಳೆದ ಸಚಿವರು
ಹುಬ್ಬಳ್ಳಿ: ಅಬ್ಭಾ ಅಂತೂ ಮುಗೀತಪ್ಪ ಮೋದಿ ಅವರ ಮೂರನೇ ಯುದ್ಧ! ನನ್ನ ಐದನೇ ಮಹಾಯುದ್ಧ!! ಎಂಬಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈಗ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ನಿನ್ನೆವರೆಗೂ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಜೋಶಿ ಅವರು ಬುಧವಾರವಿಡಿ ಕುಟುಂಬದೊಂದಿಗೆ ಸಮಯ ಕಳೆದರು.
ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಖುಷಿ ವ್ಯಕ್ತಪಡಿಸಿದರು.
ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅತ್ತ ಕೇಂದ್ರದಲ್ಲಿ ಇಲಾಖೆ ಕೆಲಸ ಇತ್ತ ಸ್ವಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಎನ್ನುತ್ತ ಹಗಲಿರುಳು ಶ್ರಮಿಸಿದ್ದರು.
ಕಳೆದೊಂದು ತಿಂಗಳಿಂದ ಅಂತೂ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿ ಹೈರಾಣಾಗಿದ್ದರು.
ಚುನಾವಣೆ ಸಮೀಪಿಸಿದಂತೆ ವಿವಿಧ ಸಮುದಾಯಗಳ ಸಮಾವೇಶ, ಬಿಜೆಪಿ ಕಾರ್ಯಕರ್ತರ ಸಭೆ, ಪ್ರಚಾರ ಸಭೆ ಹೀಗೆ ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಸಚಿವ ಜೋಶಿ ಅವರಿಗೆ ಜಂಜಾಟದಿಂದ ಈಗ ತುಸು ರಿಲೀಫ್ ಸಿಕ್ಕಿದೆ.
ಪತಿ ಪ್ರಲ್ಹಾದ ಜೋಶಿ ಅವರ ಗೆಲುವಿಗಾಗಿ ಜ್ಯೋತಿ ಜೋಶಿ ಅವರೂ ಕ್ಷೇತ್ರದ ವಿವಿಧೆಡೆ ಮಹಿಳಾ ಕಾರ್ಯಕರ್ತರ ಜತೆ ಸೇರಿ ಪ್ರಚಾರ ನಡೆಸಿದ್ದರು. ಇದೀಗ ಚುನಾವಣೆ, ಪ್ರಚಾರ ಎಲ್ಲದರಿಂದ ಹೊರಬಂದು ಮೊಮ್ಮಕ್ಕಳನ್ನು ಎಚ್ಚಾಡಿಸಿ ಸಂತಸಪಟ್ಟರು.