ಬೆಂಗಳೂರು: ಹೊಸಕೋಟೆ ಅವಿಮುಕ್ತೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿ ನೇಮಕಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಿಜೆಪಿ, ದಾಖಲೆ ಸಮೇತ ಸತ್ಯ ಬಯಲು ಮಾಡಿದ ಸಚಿವ ರಾಮಲಿಂಗ ರೆಡ್ಡಿ ಖಡಕ್ ಉತ್ತರದ ನಂತರ ಟ್ವೀಟ್ ಡಿಲೀಟ್ ಮಾಡಿದೆ.
ಹೊಸಕೋಟೆ ಅವಿಮುಕ್ತೇಶ್ವರ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲೀಮರನ್ನು ನೇಮಕ ಮಾಡುವ ಮೂಲಕ ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಸಾಭೀತುಪಡಿಸಿದೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿ, ಹಿಂದುಪರ ಹೋರಾಟಗಾರರು ಮತ್ತು ಹಿಂದೂ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಕಾಂಗ್ರೆಸ್ ಸರಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿತ್ತು.
ಟ್ವೀಟ್ ವೈರಲ್ ಆಗುತ್ತಿದ್ದಂತೆ ಸಚಿವ ರಾಮಲಿಂಗಾ ರೆಡ್ಡಿ ಅವರು, ದೇವಸ್ಥಾನದ ಸಮಿತಿಯಲ್ಲಿ ಮುಸ್ಲೀಮರನ್ನು ಆಯ್ಕೆ ಮಾಡುವುದು ಹಿಂದಿನಿAದ ನಡೆದುಕೊಂಡ ಪ್ರತೀತಿ ಎಂದು ಹೇಳುತ್ತಲೇ, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮುಸ್ಲೀಮರನ್ನು ಆಯ್ಕೆ ಮಾಡಿದ್ದ ದಾಖಲೆಗಳನ್ನು ಲಗತ್ತಿಸಿದ್ದರು. ಬಿಜೆಪಿಯ ಕೋಮುದ್ವೇಷ ಹರಡುವ ಮನಸ್ಥಿತಿಗೆ ಜನ ಬಾಯಿಗೆ ಬಂದಂತೆ ಬೈಯ್ಯತೊಡಗಿದರು.
ವಿರೋಧದಿಂದ ಎಚ್ಚೆತ್ತುಕೊಂಡ ಬಿಜೆಪಿ, ತನ್ನ ಟ್ವೀಟ್ ಡಿಲೀಟ್ ಮಾಡಿದೆ. ಆದರೆ, ಈವರೆಗೆ ತನ್ನ ಟಕೌಂಟ್‌ನಲ್ಲಿ ಕ್ಷಮೆ ಕೇಳಿಲ್ಲ. ಅಥವಾ ಆಗಿರುವ ಪ್ರಮಾದಕ್ಕೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ, ಬಿಜೆಪಿಯ ಟ್ವೀಟ್‌ನ ಸ್ಕ್ರೀನ್ ಶಾಟ್ ಕೊಂಡಿರುವ ಅನೇಕ ಹಿಂದೂಪರ ಇರುವವರು, ಕೆಲ ಕಿಡಿಗೇಡಿಗಳು ಆ ಟ್ವೀಟ್ ಅನ್ನು ಹರಡುವ ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿಗೆ ಸಿಎಂ ತರಾಟೆ: ಬಿಜೆಪಿಯ ನಡೆಯನ್ನು ಖಡಕ್ ಆಗಿ ವಿರೋಧಿಸಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕವೇ ಬಿಜೆಪಿಗೆ ಕೆಣಕಿದ್ದಾರೆ. ತಾನು ಹೇಳಿದ ಸುಳ್ಳನ್ನು ಅಳಿಸಿಹಾಕುವುದೆಂದರೆ ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ರಾಜ್ಯ ಬಿಜೆಪಿ ನಾವು ಸತ್ಯವನ್ನು ಬಿಚ್ಚಿಟ್ಟ ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿದ್ದ ತನ್ನ ಸುಳ್ಳು ಆರೋಪದ ಹೇಳಿಕೆಯನ್ನು ಅಳಿಸಿಹಾಕಿದೆ ಎಂದು ಟೀಕಿಸಿದ್ದಾರೆ.
ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಕಾಂಗ್ರೆಸ್ ಸರ್ಕಾರ ಮುಸ್ಲಿಮ್ ಸಮುದಾಯದ ವ್ಯಕ್ತಿಯನ್ನು ಸದಸ್ಯರನ್ನಾಗಿ ಮಾಡಿ ಹಿಂದೂಗಳ ಅಧಿಕಾರವನ್ನು ಕಿತ್ತುಕೊಳ್ಳಲು ಹೊರಟಿದೆ ಎಂಬ ಸುಳ್ಳು ಆರೋಪವನ್ನು ರಾಜ್ಯ ಬಿಜೆಪಿ ಮಾಡಿತ್ತು.
ಈ ಬ್ರಹ್ಮರಥೋತ್ಸವ ಸಮಿತಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಮುಸ್ಲಿಮ್ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಲಾಗಿತ್ತು ಎಂಬ ಸತ್ಯ ಸಂಗತಿಯನ್ನು ನಾನು ದಾಖಲೆ ಸಮೇತ ಮುಂದಿಟ್ಟದ್ದು ಮಾತ್ರವಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿನ ತನ್ನ ಹೇಳಿಕೆಯನ್ನು ಬಿಜೆಪಿ ಅಳಿಸಿ ಹಾಕಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದೆ.
ಬಣ್ಣ ಬಯಲಾದ ಕೂಡಲೇ ಎಚ್ಚೆತ್ತುಗೊಂಡ ಲಜ್ಜೆಗೆಟ್ಟ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿದ್ದ ತನ್ನ ಹೇಳಿಕೆಯನ್ನು ಅಳಿಸಿಹಾಕಿದೆ. ಈ ಬಗ್ಗೆ ಇನ್ನೂ ರಾಜ್ಯದ ಜನರ ಕ್ಷಮೆ ಕೇಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.