ರಾಜಕೀಯ ಸುದ್ದಿ

ಗೆಲುವು ನಿಶ್ಚಿತ, ಜನ ಸೇವೆ ಖಚಿತ: ಸ್ಟಾರ್ ಚಂದ್ರು

Share It

ಮಳವಳ್ಳಿ: ಈ‌ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಲಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಳವಳ್ಳಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಚಾರಕ್ಕೆ ಹೋದಕಡೆಯಲೆಲ್ಲ ಜನರು ತೋರುತ್ತಿರುವ ಪ್ರೀತಿ, ಅಭಿಮಾನ ನನ್ನ ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಸುಡುಬಿಸಿಲಿನಲ್ಲೂ ಜನರು ರಸ್ತೆಯಲ್ಲಿ ನನಗಾಗಿ ಕಾಯುತ್ತ ನಿಂತಿರುವುದನ್ನು ಕಂಡರೆ ಅವರ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿಯಾಗಿದ್ದಾನೆ. ಚುನಾವಣೆಯಲ್ಲಿ ಗೆಲುವು ನಿಶ್ಚಿತವಾಗಿದ್ದು ಜನತೆ ಖಚಿತ ಎಂದರು.

ರೈತಾಪಿ ವರ್ಗವೇ ಹೆಚ್ಚಾಗಿರುವ ಮಳವಳ್ಳಿ ತಾಲೂಕು ಅನೇಕ ಪ್ರವಾಸಿತಾಣಗಳು, ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಕೇಂದ್ರದಿಂದ ವಿಶೇಷ ಅನುದಾನ ತಂದು ಇಲ್ಲಿನ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು.

ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ರೈತರ ಕಷ್ಟಸುಖ‌ ಗೊತ್ತಿದೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸಂಸತ್ತಿನಲ್ಲಿ ಜನರ ದನಿಯಾಗಲು ಬಂದಿದ್ದೇನೆ. ಜನ ನನ್ನನ್ನು ಆಶೀರ್ವದಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಜೆಡಿಎಸ್ ಕಡೇ ಆಟ

ಮೋದಿ ಅವರನ್ನು ಟೀಕೆ ಮಾಡಿ ಈಗ ಮೋದಿ ಅವರ ಮೊರೆ ಹೋಗಿದ್ದೀರಿ. ರಾಮನಗರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಆಯ್ತು ಈಗ ಮಂಡ್ಯಗೆ ಬಂದಿದ್ದಾರೆ. ಟೂರಿಂಗ್‌ ಟಾಕೀಸ್ ಬಗ್ಗೆ ಮಾತನಡಲ್ಲ. ಆದರೆ ಈ ಚುನಾವಣೆ ಜೆಡಿಎಸ್ ನ ಕಡೆ ಆಟ ಎಂದು ಶಾಸಕ ನರೇಂದ್ರಸ್ವಾಮಿ ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಮಗ ಸೋತ ನಂತರ ಮಂಡ್ಯಕ್ಕೆ ನೀಡಿದ್ದ 8 ಸಾವಿರ ಕೋಟಿ ವಾಪಸ್ ತೆಗೆದುಕೊಂಡಿರಿ. ಇಲ್ಲಿ ಐದು ವರ್ಷ ಶಾಸಕರಾಗಿದ್ದವರು ಏನೂ ಮಾಡಲಿಲ್ಲ. ಕುಡಿಯುವ ನೀರು, ಶಿಕ್ಷಣ, ನೀರಾವರಿ ಸೇರಿದಂತೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.

ಸರ್ಕಾರ ಬಂದ 8 ತಿಂಗಳಲ್ಲಿ ಕ್ಷೇತ್ರಕ್ಕೆ 500 ಕೊಟಿ ರೂ. ಅನುದಾನ ತಂದಿದ್ದೇನೆ. ಕಸಬಾ, ಹಲಗೂರು ಹೋಬಳಿಯ ಎಲ್ಲಾ ಮನೆಗಳಿಗೆ 184 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಪೂರೈಕೆ ಮಾಡಲಾಗುತ್ತದೆ. ಅಧಿಕಾರದಲ್ಲಿ ಇದ್ದಾಗ ಏನಾದರೂ ಮಾಡಬೇಕು. ವೆಂಕಟರಮಣೇಗೌಡ ಅವರು ಜನಸೇವೆ ಮಾಡಲು ಬಂದಿದ್ದಾರೆ. ಅವರನ್ನು ಬೆಂಬಲಿಸಬೇಕು ಎಂದರು.

ಮಂಡ್ಯದಲ್ಲಿ ಹೊರಗಿನವರು ಗೆದ್ದ ಇತಿಹಾಸ ಇಲ್ಲ

ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರನ್ನು ದೂರವಿಡಿ. ಹೊರ ಜಿಲ್ಲೆಯವರು ಇಲ್ಲಿ ಗೆದ್ದ ಇತಿಹಾಸ ಇಲ್ಲ
ಸ್ವಾಭಿಮಾನದ ಕೋಟೆ ಬಿಟ್ಟುಕೊಟ್ಟಿಲ್ಲ ಎಂದರು.

ರೈತ ವಿರೋಧಿ ಎಪಿಎಂಸಿ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿ ಈಗ ರೈತನ ಮಗ ಅನ್ನುತ್ತಾರೆ. ರೈತ ವಿರೋಧಿ, ಬಡವರ ವಿರೋಧಿ ಮೋದಿ ಜೊತೆ ಕೈಜೋಡಿಸಿ ಅವರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ.
ಜೆಡಿಎಸ್ ಕೊಟ್ಟಿಗೆಯಲ್ಲಿ 30 ವರ್ಷದಿಂದ ಇದ್ದೆ. ಮಂಡ್ಯದಲ್ಲಿ ಒಕ್ಕಲಿಗ ನಾಯಕರನ್ನು ಬೆಳೆಯಲು ದೇವೇಗೌಡ‌ರು ಬಿಡಲಿಲ್ಲ. ಎಸ್.ಎಂ.ಕೃಷ್ಣ ಎರಡನೇ ಬಾರಿ ಸಿಎಂ ಆಗುವುದನ್ನು ತಪ್ಪಿಸಿದರು ಎಂದು ಟೀಕಿಸಿದರು.

ಪಕ್ಷ ಸೇರ್ಪಡೆ

ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ, ಅಟ್ಟುವನಹಳ್ಳಿ ಭಾಗದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅನ್ಯ ಪಕ್ಷದ ಮುಖಂಡರು ಶಾಸಕ ನರೇಂದ್ರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಮಳವಳ್ಳಿ ತಾಲೂಕಿನಲ್ಲಿ ಪ್ರಚಾರ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮಳವಳ್ಳಿ ತಾಲೂಕಿನ ಹಲವೆಡೆ ಮತಯಾಚನೆ ಮಾಡಿದರು. ತಾಲೂಕಿನ ದಳವಾಯಿ ಕೋಡಿಹಳ್ಳಿ, ಹೆಚ್.ಬಸವನಪುರ, ಕರಲ್ಲುಕಟ್ಟೆ, ಹಲಗೂರು, ಲಿಂಗಪಟ್ಟಣ, ನಿಟ್ಟೂರು, ಯತ್ತಂಬಾಡಿ, ಟಿ.ಕೆ.ಹಳ್ಳಿ, ಹುಸ್ಕೂರು, ಅಗಸನಪುರ, ಹಾಡ್ಲಿ, ಹಲಸಹಳ್ಳಿ, ಧನಗೂರು, ನಿಡಘಟ್ಟ, ಕಂದೇಗಾಲ, ನೆಲಮಾಕನಹಳ್ಳಿ,  ನಾಗೇಗೌಡನದೊಡ್ಡಿ, ಚೊಟ್ಟನಹಳ್ಳಿ, ಪಂಡಿತಹಳ್ಳಿ, ಹೊಸಹಳ್ಳಿ, ಕುಂದೂರು, ಕ್ಯಾತನಹಳ್ಳಿ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು.

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್, ಕೆಪಿಸಿಸಿ ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಇದ್ದರು.


Share It

You cannot copy content of this page