ತಿರುಪತಿಯಲ್ಲಿ ವಿಐಪಿ ಕಲ್ಚರ್ ಗೆ ಬ್ರೇಕ್ : ವಿಐಪಿ ದರ್ಶನ ರದ್ದು ಮಾಡಿದ ಟಿಟಿಡಿ
ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನವನ್ನು ವಿಐಪಿ ಕ್ಯೂನಲ್ಲಿ ಹೋಗಿ ಮಾಡಿಕೊಂಡು ಬಂದು ಬಿಡಬಹುದು ಎಂದುಕೊಂಡಿದ್ದೀರಾ, ಹಾಗಾದರೆ, ವಿಐಪಿಯಾಗಿ ತಿರುಪತಿಗೆ ಹೋಗುವುದನ್ನು ಸಧ್ಯಕ್ಕೆ ಮರೆತು ಬಿಡಿ.
ಹೌದು, ತಿರುಪತಿ ತಿಮ್ಮಪ್ಪನ ದರ್ಶನಕ್ಕಿದ್ದ ವಿಐಪಿ ಪಾಸ್ ವ್ಯವಸ್ಥೆಯನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಯಾವುದೇ ವಿಐಪಿ ಪಾಸ್ ಗೆ ಅವಕಾಶ ನೀಡದಂತೆ ಟಿಟಿಡಿ ಆದೇಶ ಮಾಡಿದೆ. ಆ ಮೂಲಕ ಮೂರು ದಿನದಲ್ಲಿ ಧರ್ಮ ದರ್ಶನ ಇಲ್ಲದೆ ಪರದಾಡುತ್ತಿದ್ದ ಭಕ್ತರ ಮೇಲೆ ತಿರುಪತಿ ತಿಮ್ಮಪ್ಪ ಕರುಣೆ ತೋರಿದಂತಾಗಿದೆ.
ವಾರದ ಕೊನೆಯ ಈ ಮೂರು ದಿನಗಳಲ್ಲಿ ವಿಐಪಿ ದರ್ಶನ ಇರುವುದಿಲ್ಲ. ಕೇವಲ ಧರ್ಮ ದರ್ಶನಕ್ಕಷ್ಟೇ ಈ ಮೂರು ದಿನಗಳಲ್ಲಿ ಅವಕಾಶ ಇರುತ್ತದೆ. ವಿಐಪಿ ಪಾಸ್ ನೀಡದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಈಗಾಗಲೇ ಪಡೆದಿದ್ದರೂ, ಅದು ಅನೂರ್ಜಿವಾಗಲಿದೆ ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿಯ ಈ ತೀರ್ಮಾನದಿಂದ ಧರ್ಮದರ್ಶನ ಪಡೆಯುವ, ಮತ್ತು ಪಾದಚಾರಿ ಮಾರ್ಗದ ಮೂಲಕ ಸಾಗಿ ದೇವರ ದರ್ಶನ ಪಡೆಯುವ ಬಡ ಮತ್ತು ಮಧ್ಯಮ ವರ್ಗದ ಭಕ್ತರಿಗೆ ಅನುಕೂಲ ಆಗಲಿದೆ. ಆದರೆ, ವಿವಿಧ ವಿಐಪಿಗಳಿಂದ ಶಿಫಾರಸು ಪತ್ರಗಳನ್ನು ಪಡೆದು, ವಿಐಪಿ ದರ್ಶನಕ್ಕೆ ಬರುತ್ತಿದ್ದ ಭಕ್ತರಿಗೆ ಇದರಿಂದ ತೊಂದೇಯಾಗಲಿದೆ.
ಶಿಫಾರಸು ಪಾಸ ಗಳನ್ನು ಪಡೆಯದಂತೆ ಟಿಟಿಡಿ ಆದೇಶ ಮಾಡಿರುವ ಕಾರಣದಿಂದ ವಿವಿಧ ರಾಜ್ಯಗಳಲ್ಲಿರುವ ಟಿಟಿಡಿ ಸದಸ್ಯರು, ಸಚಿವರು, ಶಾಸಕರ ಶಿಫಾರಸು ಪತ್ರಗಳಿಗೆ ಬೆಲೆ ಇಲ್ಲದಂತಾಗಿದೆ. ಯಾವುದೇ ಶಿಫಾರಸು ಪತ್ರಗಳಿಗೆ ಅವಕಾಶ ನೀಡದಿರಲು ಟಿಟಿಡಿ ತೀರ್ಮಾನಿಸಿದೆ. ವಾರಾಂತ್ಯದಲ್ಲಿ ನೀವೇನಾದರೂ ತಿಮ್ಮಪ್ಪನ ಕೃಪೆಗೆ ಪಾತ್ರರಾಗಬೇಕಾದರೆ, ಧರ್ಮ ದರ್ಶನವೇ ಗತಿ ಎನ್ನಬಹುದು. ವಾರಾಂತ್ಯದ ಈ ಮೂರು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಎಂದಿನಂತೆಯೇ ವಿಐಪಿ ದರ್ಶನ ಮುಂದುವರಿಯಲಿದೆ.