ಮಡಿಕೇರಿ: ಕಾನೂನಿನ ಕಾರಣಕ್ಕೆ ಮದುವೆ ಮುರಿದುಬಿದ್ದಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಬಾಲಕಿಯ ಶಿರವನ್ನೇ ಚೆಂಡಾಡಿದ್ದು, ಮುಂಡದೊಡನೆ ಪರಾರಿಯಾಗಿದ್ದ.
ಇದೀಗ ದೇಹದಿಂದ ಬೇರ್ಪಟ್ಟಿದ್ದ ಮುಂಡವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಗೆ ನುಗ್ಗಿ ಕೊಲೆ ಮಾಡಿ, ಬಾಲಕಿಯ ರುಂಡದೊAದಿಗೆ ಪರಾರಿಯಾಗಿದ್ದ ಪ್ರಕಾಶ್ ಎಂಬ ಆರೋಪಿಯನ್ನು ಪೊಲೀಸರು ನೆನ್ನೆಯೇ ಪತ್ತೆ ಮಾಡಿದ್ದರು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ರುಂಡ ಇಟ್ಟಿರುವ ಜಾಗ ಪತ್ತೆಯಾಗಿದೆ.
ಬಾಲಕಿಯೊಂದಿಗೆ ಆರೋಪಿಯ ನಿಶ್ಚಿತಾರ್ಥ ಗುರುವಾರ ನಿಶ್ಚಯವಾಗಿತ್ತು. ಆದರೆ, ಆಕೆಗೆ ೧೬ ವರ್ಷವಾಗಿದ್ದು, ೧೮ರವರೆಗೆ ಮದುವೆ ಮಾಡುವಂತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಕೀತು ಮಾಡಿ, ನಿಶ್ಚಿತಾರ್ಥ ನಿಲ್ಲಿಸಿದ್ದರು. ಅಂದೇ ಬಾಲಕಿಯ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಕೂಡ ಬಂದಿತ್ತು. ಉತ್ತಮ ಅಂಕ ಪಡೆದಿದ್ದ ಆಕೆ ಖುಷಿಖುಷಿಯಿಂದಲೇ ಮನೆಗೆ ಬಂದಿದ್ದಳು.
ಮದುವೆ ಮುರಿದುಬಿದ್ದರೂ, ಖುಷಿಯಾಗಿರುವ ಬಾಲಕಿ ಮೀನಾ ಕಂಡು, ಆರೋಪಿ ಪ್ರಕಾಶ್‌ಗೆ ಸಿಟ್ಟು ಬಂದಿತ್ತು. ಹೀಗಾಗಿ, ಮನೆಗೆ ನುಗ್ಗಿ ಬಾಲಕಿಯ ಅಪ್ಪ-ಅಮ್ಮನಿಗೂ ಥಳಿಸಿ, ಬಾಲಕಿಯನ್ನು ಎಳೆದುಕೊಂಡು ಹೋಗಿ, ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಅಲ್ಲಿಯೇ ಬಿಸಾಕಿದ್ದ. ಆದರೆ, ರುಂಡವನ್ನು ತನ್ನೊಡನೆಯೇ ತೆಗೆದುಕೊಂಡು ಹೋಗಿದ್ದ.
ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಿದ ಪೊಲೀಸರು ಮೊದಲಿಗೆ ಆರೋಪಿ ಪ್ರಕಾಶ್‌ನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ರುಂಡವಿರುವ ಜಾಗ ಪತ್ತೆಯಾಗಿರಲಿಲ್ಲ. ನೆನ್ನೆಯಿಡೀ ವಿಚಾರಣೆ ನಡೆಸಿದರೂ, ತಾನು ರುಂಡವನ್ನಿಟ್ಟಿರುವ ಜಾಗದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ, ಇಂದು ಬೆಳಗ್ಗೆ ಎಸ್.ಪಿ ನೇತೃತ್ವದಲ್ಲಿ ವಿಚಾರಣೆ ನಡೆದಾಗ ಘಟನೆ ನಡೆದ ಸ್ಥಳದಿಂದ ೩೦೦ ಮೀಟರ್ ದೂರದಲ್ಲಿ ಮರದ ಕೊಂಬೆಯ ಮೇಲಿಟ್ಟಿದ್ದು ಬಯಲಾಗಿದೆ.
ಆರೋಪಿ ಪ್ರಕಾಶ್, ಬಾಲಕಿ ಮೀನಾಳನ್ನು ಪ್ರೀತಿಸುತ್ತಿದ್ದ. ಶಾಲೆಯ ಬಳಿಗೆಲ್ಲ ಹೋಗಿ ಕಾಟ ಕೊಡುತ್ತಿದ್ದ ಎನ್ನಳಾಗಿದೆ. ಹೀಗಾಗಿ, ಶಿಕ್ಷಕರು ಮನೆಯವರಿಗೆ ತಿಳಿಸಿದ್ದರು. ಹೀಗಾಗಿ, ಕುಟುಂಬಸ್ಥರು ಮದುವೆ ನಡೆಸಲು ನಿರ್ಧರಿಸಿದ್ದರು. ಆದರೆ, ಕಾನೂನಿನ ಅನ್ವಯ ಮದುವೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದ ಕಾರಣಕ್ಕೆ ಮದುವೆ ತಾತ್ಕಾಲಿಕವಾಗಿ ಮುರಿದು ಬಿದ್ದಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಇಂತಹ ಬರ್ಬರ ಕೃತ್ಯ ಎಸಗಿದ್ದಾನೆ.