ನವದೆಹಲಿ: ಲಿಕ್ಕರ್ ನೀತಿ ಹಗರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಘರ್ಜಿಸಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿರುವ ಕೇಜ್ರಿವಾಲ್, ಜೈಲಿನಿಂದ ಬಂದ ನಂತರ ಶನಿವಾರ ಮೊದಲ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕರು ಮಾತ್ರ ಅಲ್ಲ, ತನ್ನದೇ ಪಕ್ಷದ ನಾಯಕರನ್ನೂ ಬಿಜೆಪಿ ಜೈಲಿಗೆ ಹಾಕಲಿದೆ. ಪ್ರಧಾನಿ ನರೇಂದ್ರ ಮೋದಿ “ಒಂದು ದೇಶ, ಒಬ್ಬ ನಾಯಕ” ಎಂಬ ಮಿಷನ್ ಆರಂಭಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಶೀಘ್ರದಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜಕೀಯ ಜೀವನವನ್ನೂ ಮುಗಿಸಲಿದ್ದಾರೆ. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್ ಚೌಹಾಣ್, ವಸುಂಧರಾ ರಾಜೇ, ಮನೋಹರ್ ಲಾಲ್ ಖಟ್ಟರ್, ರಮಣ್ ಸಿಂಗ್ ಅವರ ರಾಜಕೀಯ ಮುಗಿಸಲಾಗಿದೆ. ಈಗ ಮುಂದಿನ ಟಾರ್ಗೆಟ್ ಯೋಗಿ ಆದಿತ್ಯನಾಥ್. ಮೋದಿ ಮತ್ತೆ ಪ್ರಧಾನಿಯಾದರೆ ಎರಡು ತಿಂಗಳೊಳಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಬದಲಿಸುತ್ತಾರೆ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಬಿಜೆಪಿಯಲ್ಲಿ ಅಧಿಕಾರ ಕಿತ್ತುಕೊಳ್ಳುವ ಎಂಜಿನಿಯರ್‌ಗಳು. ರೆಕ್ಕೆ ಕತ್ತರಿಸಲು ಅನೇಕ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂಗಳನ್ನು ಬದಲಾಯಿಸಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.