ಚೆನ್ನೈ: ಪ್ಲೇ ಆಫ್ ಹಾದಿಯಲ್ಲಿ ಸಾಗಬೇಕಾದರೆ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈಗಾಗಲೇ ಫ್ಲೇ ಆಫ್ ಹಾದಿ ಸುಗಮ ಮಾಡಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ರಾಜಸ್ಥಾನ ರಾಯಲ್ಸ್ ತಂಡ, ಚೆನ್ನೈ ತಂಡವನ್ನು ಸೋಲಿಸಿದ್ದೇ ಆದರೆ, ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಫ್ಲೇ ಆಫ್ ಕನಸು ಮತ್ತಷ್ಟು ಸಲೀಸಾಗಲಿದೆ. ಹೀಗಾಗಿ, ಕ್ರಿಕೆಟ್ ಅಭಿಮಾನಿಗಳ ಗಮನವೆಲ್ಲ ಇದೀಗ ರಾಜಸ್ಥಾನ ತಂಡದ ಮೇಲಿದೆ. ಪಂದ್ಯ ೩.೩೦ಕ್ಕೆ ಆರಂಭವಾಗಲಿದ್ದು, ರಾತ್ರಿ ೭.೩೦ಕ್ಕೆ ನಡೆಯಲಿರುವ ಆರ್‌ಸಿಬಿ ಪಂದ್ಯದ ಭವಿಷ್ಯ ನಿರ್ಧರಿಸಲಿದೆ.
ಚೆನ್ನೈ ತಂಡ ೧೨ ಅಂಕಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧದ ಸೋಲು ಚೆನ್ನೈ ಅನ್ನು ಕಂಗೆಡಿಸಿದೆ. ಹೀಗಾಗಿ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಉಳಿದೆರೆಡು ಪಂದ್ಯಗಳಲ್ಲಿ ಗೆದ್ದರೆ ಮಾತ್ರವೇ ನಾಕೌಟ್ ಹಂತಕ್ಕೆ ಕಾಲಿಡಲಿದೆ.
ಆರ್‌ಸಿಬಿ ಅಭಿಮಾನಿಗಳು ಚೆನ್ನೈ ಸೋಲಿಗೋಸ್ಕರವೇ ಪ್ರಾರ್ಥನೆ ಮಾಡುತ್ತಿದ್ದಾರೆ. ಚೆನ್ನೈ ಈ ಪಂದ್ಯ ಸೋತು, ಮುಂದಿನ ಪಂದ್ಯವನ್ನು ಸೋತರೆ, ಆರ್‌ಸಿಬಿ ಸುಲಭವಾಗಿ ನಾಕೌಟ್ ಹಂತಕ್ಕೆ ಹೋಗಲಿದೆ. ಒಂದು ವೇಳೆ ಕೊನೆಯ ಪಂದ್ಯ ಗೆದ್ದರೂ, ಆರ್‌ಸಿಬಿ ರನ್ ರೇಟ್ ಆಧಾರದಲ್ಲಿ ನಾಕೌಟ್ ಹಂತಕ್ಕೆ ಕಾಲಿಡುವ ಎಲ್ಲ ಅವಕಾಶಗಳಿವೆ. ಹೀಗಾಗಿ, ಈ ಪಂದ್ಯ ಆರ್‌ಸಿಬಿಗೆ ನಿರ್ಣಾಯಕವಾಗಲಿದೆ.
ಚೆನ್ನೈ ಅಜೀಕ್ಯಾ ರಹಾನೆ, ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ವೈಫಲ್ಯದಿಂದ ಬಡವಾಗಿದೆ. ಶಿವಂ ದುಬೆ, ರವೀಂದ್ರ ಜಡೇಜಾ ಮಿಂಚುತ್ತಿಲ್ಲ, ದೋನಿ ಬ್ಯಾಟ್‌ನಿಂದಬರುತ್ತಿರುವ ರನ್ ಗೆಲುವಿಗೆ ಸಾಕಾಗುತ್ತಿಲ್ಲ ಎಂಬುದು ಚೆನ್ನೈ ತಂಡದ ತಲೆನೋವಾಗಿದೆ.
ರಾಜಸ್ಥಾನ ತಂಡ ನಾಯಕ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಶುಭಂ ದುಬೆ, ಪೋವೆಲ್ ಆರ್ಭಟದಲ್ಲಿ ಗೆಲುವು ಕಾಣುತ್ತಿದೆ. ಆರ್.ಅಶ್ವಿನ್, ಯಜುವೇಂದ್ರ ಚಹಾಲ್ ಬೌಲಿಂಗ್ ಬಲ ರಾಜಸ್ಥಾನ ತಂಡಕ್ಕಿದೆ. ಹೀಗಾಗಿ, ಪೈಪೋಟಿ ನಿರೀಕ್ಷಿಸಬಹುದು.