ಮೈಸೂರು: ಮಕ್ಕಳು ಹುಟ್ಟಿದ ಖುಷಿ ತಂದೆ-ತಾಯಿಗೆ ಎಂತಹ ನೋವನ್ನು ಮರೆಸುತ್ತದೆ ಎಂಬುದೇನೋ ಸತ್ಯ, ಅದೇ ಖುಷಿಯಲ್ಲಿ ಆಸ್ಪತ್ರೆ ಆವರಣದಲ್ಲಿಯೇ ಕಾಲಕಳೆದ ವ್ಯಕ್ತಿಯೊಬ್ಬ ಬೆಳಗಾಗುವುದರೊಳಗೆ ಹೆಣವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬ ಹೆಣವಾಗಿ ಬಿದ್ದಿದ್ದಾನೆ. ಆತನನ್ನು ಪರಿಶೀಲಿಸಿದ ವೈದ್ಯರು ರಾತ್ರಿಯಿಡಿ ಚಳಿಯಲ್ಲಿ ಮಲಗಿದ್ದ ಕಾರಣಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.
ಪತ್ನಿಯನ್ನು ಹೆರಿಗೆಗಾಗಿ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದ ನಾಗೇಶ್ ಎಂಬ 47 ವರ್ಷದ ವ್ಯಕ್ತಿಯೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಭಾನುವಾರ ಮಡದಿಗೆ ಹೆರಿಗೆಯಾಗಿತ್ತು. ಮಗು ಜನಿಸಿದ ಖುಷಿಯಲ್ಲಿ ಮನೆಗೆ ಹೋಗದೆ ಆಸ್ಪತ್ರೆಯಲ್ಲಿಯೇ ಇರಲು ನಾಗೇಶ್ ತೀರ್ಮಾನಿಸಿದ್ದರು.
ಆದರೆ, ಹೆರಿಗೆ ಆಸ್ಪತ್ರೆಯಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎಂದು ಸಿಬ್ಬಂದಿ ಹೇಳಿದ ಕಾರಣಕ್ಕೆ ಆಸ್ಪತ್ರೆ ಆವರಣದಲ್ಲಿಯೇ ನಾಗೇಶ್ ಮಲಗಿದ್ದರು ಎನ್ನಲಾಗಿದೆ. ರಾತ್ರಿ 10.30ರ ಸುಮಾರಿಗೆ ಮಲಗಿದ್ದ ವ್ಯಕ್ತಿ, ಬೆಳಗಿನ ಜಾವ 7 ಗಂಟೆ ಸುಮಾರಿಗೆ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.
ನಾಗೇಶ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವರು ಎಂದು ಹೇಳಲಾಗಿದೆ. ನಾಗೇಶ್ ಶವವನ್ನು ಪಡೆಯಲು ಕುಟುಂಬಸ್ಥರು ಇನ್ನೂ ಆಗಮಿಸಿಲ್ಲವಾದ ಕಾರಣ ಶವ ಆಸ್ಪತ್ರೆಯ ಆವರಣದಲ್ಲಿಯೇ ಇದೆ ಎಂದು ಹೇಳಲಾಗಿದೆ. ಒಟ್ಟಾರೆ, ಮಗು ಜನಿಸಿದ ಖುಷಿಯಲ್ಲಿದ್ದ ವ್ಯಕ್ತಿ ಮಗುವಿನ ಮುಖ ನೋಡುವ ಮೊದಲೇ ಮೃತಪಟ್ಟಿರುವುದು ದುರಂತವೇ ಸರಿ.