ರಾಜಕೀಯ ಸುದ್ದಿ

ಪೌರಕಾರ್ಮಿಕರ ಕಲ್ಯಾಣಕ್ಕೆ ಮಹತ್ವದ ಕ್ರಮ: 500 ಜನರಿಗೆ ಒಬ್ಬ ಪೌರಕಾರ್ಮಿಕರ ನೇಮಕ – ಡಾ. ಯತೀಂದ್ರ ಸಿದ್ದರಾಮಯ್ಯ.

Share It

ಪೌರಕಾರ್ಮಿಕರ ವಿಶೇಷ ಭತ್ಯೆ ಹೆಚ್ಚಿಸಲಾಗುವುದು – ಡಾ. ಯತೀಂದ್ರ ಸಿದ್ದರಾಮಯ್ಯ.

ಬೆಂಗಳೂರು: ನಗರಗಳ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅವರ ಕಲ್ಯಾಣ ಮತ್ತು ಭದ್ರತೆಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಂದು ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ನಗರದ ತ್ರಿಪುರವಾಸಿನಿಯ ಐ.ಪಿ.ಡಿ. ಸಾಲಪ್ಪ ವೇದಿಕೆಯಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ 700 ಜನರಿಗೆ ಒಬ್ಬ ಪೌರಕಾರ್ಮಿಕರಿರುವ ಅನುಪಾತವನ್ನು ಬದಲಿಸಿ, ಇನ್ನು ಮುಂದೆ ಪ್ರತಿ 500 ಜನರಿಗೆ ಒಬ್ಬರಂತೆ ಪೌರಕಾರ್ಮಿಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಖಾಯಂ ಪೌರಕಾರ್ಮಿಕರ ವಿಶೇಷ ಭತ್ಯೆಯನ್ನು ರೂ.7,000ರಿಂದ ರೂ.10,000ಕ್ಕೆ ಹೆಚ್ಚಿಸಲಾಗುವುದು. ನೇರ ನೇಮಕಾತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ರೂ.5,000 ವಿಶೇಷ ಭತ್ಯೆ ಹಾಗೂ ಬೆಳಗಿನ ಉಪಾಹಾರ ಭತ್ಯೆಯನ್ನು ರೂ.35ರಿಂದ ರೂ.50ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ನಗರಗಳು ಪ್ರತಿದಿನ ಬೆಳಗಿನ ಜಾವವೇ ಸ್ವಚ್ಛವಾಗಿ ಮತ್ತು ಸುಂದರವಾಗಿ ಕಂಗೊಳಿಸುವುದರ ಹಿಂದೆ ಸಾವಿರಾರು ಪೌರಕಾರ್ಮಿಕ ಸಹೋದರ, ಸಹೋದರಿಯರ ಅಪಾರ ಪರಿಶ್ರಮವಿದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಪೌರಕಾರ್ಮಿಕರು ನಮ್ಮ ನಗರಗಳ ನೈರ್ಮಲ್ಯದ ಹರಿಕಾರರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ಪೌರಕಾರ್ಮಿಕರ ಹಿತರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ಪ್ರತ್ಯೇಕ ಕರ್ನಾಟಕ ಪೌರಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲಾಗುವುದು. ವಸತಿ ರಹಿತ ಖಾಯಂ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ರೂ.6 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ರೂ.1.50 ಲಕ್ಷ ಸೇರಿದಂತೆ ಒಟ್ಟು ರೂ.7.50 ಲಕ್ಷ ಆರ್ಥಿಕ ನೆರವು ದೊರೆಯಲಿದೆ ಎಂದು ಅವರು ತಿಳಿಸಿದರು.

ಪೌರಕಾರ್ಮಿಕರ ನಿಸ್ವಾರ್ಥ ಸೇವೆಗೆ ಸೂಕ್ತ ಗೌರವ, ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಪೌರಕಾರ್ಮಿಕರ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸಿ, ಅವರ ಬೆನ್ನೆಲುಬಾಗಿ ನಿಲ್ಲುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ನಗರಗಳ ಶ್ರೇಯಸ್ಸು ಮತ್ತು ಸಾರ್ವಜನಿಕ ಆರೋಗ್ಯದ ಹಿಂದೆ ಪೌರಕಾರ್ಮಿಕರ ಸೇವೆ ಅಪಾರವಾಗಿದ್ದು, ಅವರ ಶ್ರಮವನ್ನು ಸರ್ಕಾರ ಸಂಪೂರ್ಣವಾಗಿ ಗುರುತಿಸಿ ಗೌರವಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್, ಕೃಷಿ ಸಚಿವರಾದ ಶ್ರೀ ಪಿ. ಎಂ. ನರೇಂದ್ರ ಸ್ವಾಮಿ, ಪೌರಾಡಳಿತ ಸಚಿವರಾದ ಶ್ರೀ ಎಚ್. ಸಿ. ಬಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ, ಮೀನುಗಾರಿಕೆ ಮತ್ತು ಬಂದರುಗಳು, ಒಳನಾಡು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ಕೆ.ಎಸ್. ಬಸವಂತಪ್ಪ. ಮಾಜಿ ಸಚಿವರಾದ ಶ್ರೀ ಹೆಚ್ ಆಂಜನೇಯ, ಸಪಾಯಿ ಕರ್ಮಚಾರಿ ಅಧ್ಯಕ್ಷರಾದ ಶ್ರೀ ಅಶೋಕ್ ಸಾಲಪ್ಪ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ. ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.


Share It

You cannot copy content of this page